ಪಾಕ್ ವಾಣಿಜ್ಯ ಮಂಡಳಿಯನ್ನು ಆಹ್ವಾನಿಸಿದ್ದರಲ್ಲಿ ತಪ್ಪಿಲ್ಲ ಎಂದ ಗುಜರಾತ್ ಸರಕಾರ
ವೈಬ್ರಂಟ್ ಗುಜರಾತ್ ಶೃಂಗ

ಗಾಂಧಿನಗರ,ಜ.11: 2019ನೇ ಸಾಲಿನ ವೈಬ್ರಂಟ್ ಗುಜರಾತ್ ವಿಶ್ವಶೃಂಗಕ್ಕೆ ಪಾಕಿಸ್ಥಾನದ ವಾಣಿಜ್ಯ ಮಂಡಳಿಯನ್ನು ಆಹ್ವಾನಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಗುಜರಾತ್ ಸರಕಾರವು ಶುಕ್ರವಾರ ಹೇಳಿದೆ.
ಮೂರು ದಿನಗಳ ಕಾಲ ಇಲ್ಲಿ ನಡೆಯಲಿರುವ ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜ.18ರಂದು ಉದ್ಘಾಟಿಸಲಿದ್ದಾರೆ.
ವಿಶ್ವ ವಾಣಿಜ್ಯ ಮಂಡಳಿಗಳನ್ನು ಆಹ್ವಾನಿಸಲು ಗುಜರಾತ್ ವಾಣಿಜ್ಯ ಮತ್ತು ಕೈಗಾರಿಕಾ ಸಂಘ(ಜಿಸಿಸಿಐ)ವು ನಿರ್ಧರಿಸಿತ್ತು ಮತ್ತು ರಾಜ್ಯ ಸರಕಾರವು ಅದಕ್ಕೆ ಒಪ್ಪಿಗೆ ನೀಡಿದೆ.
ಜಿಸಿಸಿಐ ಆಹ್ವಾನಿಸಿರುವ ವಿಶ್ವ ವಾಣಿಜ್ಯ ಮಂಡಳಿಗಳಲ್ಲಿ ಕರಾಚಿ ವಾಣಿಜ್ಯ ಸಂಘವು ಒಂದಾಗಿದೆ. ಸರಕಾರವು ಯಾವುದೇ ಆಹ್ವಾನವನ್ನು ನೀಡಿಲ್ಲ. ಆಹ್ವಾನಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮುಖ್ಯ ಕಾರ್ಯದರ್ಶಿ ಜೆ.ಎನ್.ಸಿಂಗ್ ಅವರು ಪಾಕ್ ನಿಯೋಗಕ್ಕೆ ಆಹ್ವಾನ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತ ತಿಳಿಸಿದರು.
2013ರಲ್ಲಿ ಪಾಕಿಸ್ತಾನದ ವ್ಯಾಪಾರ ನಿಯೋಗವೊಂದು ದ್ವೈವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಗುಜರಾತಿಗೆ ಆಗಮಿಸಿತ್ತಾದರೂ ಗಡಿಯಲ್ಲಿ ಉದ್ವಿಗ್ನತೆಯ ಕಾರಣದಿಂದಾಗಿ ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸದೆ ಸ್ವದೇಶಕ್ಕೆ ವಾಪಸಾಗಿತ್ತು. 2015 ಮತ್ತು 2017ರಲ್ಲಿ ಯಾವುದೇ ಪಾಕ್ ನಿಯೋಗವನ್ನು ಆಹ್ವಾನಿಸಿರಲಿಲ್ಲ.