ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ, ಪುತ್ರನಿಗೆ ಬಂಧನದಿಂದ ವಿನಾಯಿತಿ ಅವಧಿ ವಿಸ್ತರಣೆ
ಹೊಸದಿಲ್ಲಿ, ಜ.11: ಏರ್‌ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂಗೆ ನೀಡಲಾಗಿದ್ದ ಬಂಧನದಿಂದ ವಿನಾಯಿತಿ ಅವಧಿಯನ್ನು ಪಟಿಯಾಲಾ ಹೌಸ್ ಕೋರ್ಟ್ ಫೆ.1ರವರೆಗೆ ವಿಸ್ತರಿಸಿದೆ. ಅಲ್ಲದೆ ಪ್ರಕರಣದ ವಿಚಾರಣೆಯನ್ನೂ ಫೆ.1ಕ್ಕೆ ಮುಂದೂಡಿದೆ.
ಪ್ರಕರಣದ ವಿಚಾರಣೆ ಸಾಗುತ್ತಿದ್ದು, ಇನ್ನೂ ಮುಕ್ತಾಯವಾಗಿಲ್ಲ ಎಂದು ಸಿಬಿಐ ಪ್ರತಿನಿಧಿಯಾಗಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ವಿಶೇಷ ಸಿಬಿಐ ನ್ಯಾಯಾಧೀಶ ಒಪಿ ಸೈನಿ ವಿಚಾರಣೆಯನ್ನು ಮುಂದೂಡಿದರು. ಪ್ರಕರಣದ ಹಿನ್ನೆಲೆಯಲ್ಲಿ ಚಿದಂಬರಂ ಅವರ ವಿರುದ್ಧ ಕಾನೂನು ಕ್ರಮ ಜರಗಿಸಲು ಕೇಂದ್ರ ಸರಕಾರ ಅನುಮತಿ ನೀಡಿದೆ ಎಂದು ಸಿಬಿಐ ನವೆಂಬರ್ 26ರಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಪ್ರಕರಣದಲ್ಲಿ ಆರೋಪಿಗಳಾಗಿರುವ ಇತರರ ವಿರುದ್ಧದ ಕಾನೂನು ಕ್ರಮಕ್ಕೆ ಜನವರಿ 11ರೊಳಗೆ ಅನುಮತಿ ಪಡೆದುಕೊಳ್ಳುವಂತೆ ನ್ಯಾಯಾಲಯ ಕಳೆದ ಡಿಸೆಂಬರ್‌ನಲ್ಲಿ ತಿಳಿಸಿತ್ತು.
Next Story