ಶಿಕ್ಷಣ ಸಚಿವರ ಶೀಘ್ರ ನೇಮಕಕ್ಕೆ ಆಗ್ರಹಿಸಿ ಸಿಎಫ್‌ಐ ಧರಣಿ

ಮಂಗಳೂರು, ಜ.12: ಶಿಕ್ಷಣ ಸಚಿವರ ಶೀಘ್ರ ನೇಮಕ ಮತ್ತಿತರ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಸಿಎಫ್‌ಐ) ಮಂಗಳೂರು ತಾಲೂಕು ಸಮಿತಿಯು ಶನಿವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯ ಎದುರು ಧರಣಿ ನಡೆಸಿತು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಶಾಕಿರ್ ಮಾತನಾಡಿ, ರಾಜ್ಯ ಸಚಿವಾಲಯದಲ್ಲಿ ಪ್ರಮುಖ ಇಲಾಖೆಯಾದ ಶಿಕ್ಷಣ ಇಲಾಖೆಯಲ್ಲಿ ಸಚಿವರಿಲ್ಲದೆ ಇಲಾಖೆಯೇ ನಿರ್ಜೀವವಾಗಿದೆ. ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ದೂರಿದರು. ಪ್ರಮುಖ ಹುದ್ದೆಗಳಿಗಾಗಿ ರಾಜಕೀಯ ಕಚ್ಚಾಟ ನಡೆಸುತ್ತಿರುವಾಗ ಸಚಿವಾಲಯದ ಮುಖ್ಯ ಹುದ್ದೆಯಾದ ಶಿಕ್ಷಣ ಸಚಿವ ಸ್ಥಾನಕ್ಕೆ ಇಂದು ಗತಿಯಿಲ್ಲದಾಗಿದೆ. ಶಾಲೆ ಆರಂಭವಾಗಿ ತಿಂಗಳುಗಳೇ ಕಳೆದರೂ ರಾಜ್ಯದ ಹಲವಾರು ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಯಾಗದೆ ತುಕ್ಕು ಹಿಡಿಯುತ್ತಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಗಳಲ್ಲಿ 3 ತಿಂಗಳಿನಿಂದ ಪೂರ್ಣಾವಧಿ ನಿರ್ದೇಶಕರಿಲ್ಲದೆ ಹಾಗೂ ಪ್ರಮುಖ ಹುದ್ದೆಗಳಾದ ಜಂಟಿ ನಿರ್ದೇಶಕರು ಮತ್ತು ಉಪನಿರ್ದೇಶಕರಿಲ್ಲದೆ ವ್ಯವಸ್ಥೆಯೇ ಸ್ಥಗಿತಗೊಂಡಿದೆ ಎಂದು ಮುಹಮ್ಮದ್ ಶಾಕಿರ್ ಆರೋಪಿಸಿದರು.
ಸಿಎಫ್‌ಐ ಅಧ್ಯಕ್ಷ ಸಾದಿಕ್, ಕಾರ್ಯದರ್ಶಿ ನಿಝಾಂ, ಬಾಸಿತ್ ಮುರ್ಶಿದಾ, ಮುಫೀದಾ, ಮಂಗಳೂರು ತಾಲೂಕು ಅಧ್ಯಕ್ಷ ಸಿರಾಜ್, ಕಾರ್ಯದರ್ಶಿ ಶಮೀಮ್, ವಿವಿಧ ಕಾಲೇಜು ವಿದ್ಯಾರ್ಥಿ ನಾಯಕರಾದ ಜುನೈದ್, ಫಾರೂಕ್ ಮತ್ತು ಶಹಬಾಝ್ ಉಪಸ್ಥಿತರಿದ್ದರು. ಫಹಾದ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





