ಫಲ್ಗುಣಿ ನದಿಯಲ್ಲಿ ಹಬ್ಬದ ವಾತಾವರಣ
► ಆಕರ್ಷಕ ಜಲಸಾಹಸ ಕ್ರೀಡೆಗಳು ► ತನ್ಮಯಗೊಳಿಸುವ ದೋಣಿ ಯಾನ

ಮಂಗಳೂರು, ಜ.12: ಗಗನಚುಂಬಿ ಕಟ್ಟಡಗಳ ನಡುವೆ, ಬಿಸಿಲ ಧಗೆಯ ನಗರ ಜೀವನದಿಂದ ತುಸು ದೂರವಾಗಿ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ದ.ಕ. ಜಿಲ್ಲಾಡಳಿತದ ನದಿ ಉತ್ಸವ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ.
ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಬಂಗ್ರ ಕೂಳೂರು ಬಳಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ನದಿ ಉತ್ಸವವು ಪ್ರಾಕೃತಿಕ ಸೊಬಗನ್ನು ಸವಿಯುವ ಜತೆಗೆ ಫಲ್ಗುಣಿ ನದಿಯ ಸೌಂದರ್ಯವನ್ನು ಆಸ್ವಾದಿಸಲು ಅವಕಾಶವನ್ನು ಕಲ್ಪಿಸಿದೆ. ಶಾಂತವಾಗಿ ಹರಿಯುವ ಫಲ್ಗುಣಿ ನದಿಯ ತೀರಗಳಾದ ಕೂಳೂರು ಸೇತುವೆ, ಸುಲ್ತಾನ್ ಬತ್ತೇರಿ ಹಾಗೂ ಬಂಗ್ರಕೂಳೂರು ಸುತ್ತಮುತ್ತಲೆಲ್ಲಾ ಸಡಗರ. ಕೂಳೂರು ಹಾಗೂ ಬಂಗ್ರಕೂಳೂರು ಬಳಿ ನದಿಯಲ್ಲಿ ಸಾಹಸ ಜಲಕ್ರೀಡೆಗಳು ನೋಡುಗರನ್ನು ಆಕರ್ಷಿಸಿದರೆ, ಕಯಾಕಿಂಗ್, ಸ್ಪೀಡ್ ಬೋಟ್ ಮೊದಲಾದ ಜಲ ಕ್ರೀಡೆಗಳು ಫಲ್ಗುಣಿ ನದಿಯ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುತ್ತಾ ದೋಣಿಯಲ್ಲಿ ಒಂದು ತೀರದಿಂದ ಮತ್ತೊಂದು ತೀರಕ್ಕೆ ನದಿ ಉತ್ಸವಕ್ಕೆ ಸಾಗುವವರಿಗೆ ಮುದ ನೀಡುತ್ತಿದೆ.
ಗಿಡ ನೆಟ್ಟು, ಫಲ್ಗುಣಿಗೆ ಹೂ ಅರ್ಪಿಸಿ ಉತ್ಸವಕ್ಕೆ ಚಾಲನೆ
ಸಚಿವ ಯು.ಟಿ.ಖಾದರ್‌ರವರು ಬೆಳಗ್ಗೆ ಕೂಳೂರು ಸೇತುವೆ ಸಮೀಪದಲ್ಲಿ ನಿರ್ಮಿಸಲಾದ ಜಟ್ಟಿ ಬಳಿ ಉಪಸ್ಥಿತರಿದ್ದ ಹಿರಿಯರು ಹಾಗೂ ಮಕ್ಕಳ ಜತೆ ಗಿಡ ನೆಟ್ಟು, ಫಲ್ಗುಣಿ ನದಿಗೆ ಹೂ ಅರ್ಪಿಸುವ ಮೂಲಕ ನದಿ ಉತ್ಸವಕ್ಕೆ ಚಾಲನೆ ನೀಡಿದರು. ಸಾಂಕೇತಿಕ ಉದ್ಘಾಟನೆಯ ಕಾರ್ಯಕ್ರಮವನ್ನು ಡ್ರೋಣ್ ಕೂಡಾ ಕಣ್ತುಂಬಿಸಿಕೊಂಡರೆ, ಆ ಡ್ರೋಣ್ ಹಾರಾಟವನ್ನು ಅಲ್ಲಿ ನೆರೆದಿದ್ದವರ ಕ್ಯಾಮಾರಗಳು, ಮೊಬೈಲ್‌ಗಳ ಕ್ಯಾಮಾರಾಗಳು ಸೆರೆ ಹಿಡಿದವು.
ಸಾಂಕೇತಿಕ ಉದ್ಘಾಟನೆಯ ಬಲಿಕ ಸಚಿವರು ಹಾಗೂ ಉಪಸ್ಥಿತರಿದ್ದ ಗಣ್ಯರು ಫಲ್ಗುಣಿ ನದಿ ತೀರದಲ್ಲಿ ನಿರ್ಮಿಸಲಾದ ಜೆಟ್ಟಿ ಮೂಲಕ ದೋಣಿನಲ್ಲಿ ಬಂಗ್ರ ಕೂಳೂರು ನದಿ ತೀರಕ್ಕೆ ಜೆಟ್ಟಿಗೆ ಸಾಗಿದರು. ದೋಣಿಯಲ್ಲಿ ನಾದಾ ಮಣಿನಾಲ್ಕೂರುರವರ ಪ್ರಕೃತಿ ಹಾಡು ಒಂದೆಡೆಯಾದರೆ, ಮತ್ತೊಂದು ದೋಣಿಯಲ್ಲಿ ಡೋಲು ಕುಣಿತದ ಮೂಲಕ ನದಿ ಉತ್ಸವಕ್ಕೆ ಪ್ರಾೃತಿಕ ಸ್ಪರ್ಶವನ್ನು ನೀಡಲಾಯಿತು.
ಬಂಗ್ರಕೂಳೂರು ಬಳಿ ದೋಣಿಯಿಂದ ಇಳಿದು ಜಟ್ಟಿ ಮೂಲಕ ಸಾಗಿದ ಕೊರಗರ ಆಕರ್ಷಕ ಡೋಲು ಕುಣಿತ ಗಣ್ಯರನ್ನು ಸ್ವಾಗತಿಸಿತು. ಬಂಗ್ರ ಕೂಳೂರಿನ ಸುಮಾರು 23 ಎಕರೆ ಸರಕಾರಿ ಜಾಗದಲ್ಲಿ ಹಾಕಲಾದ ವಿವಿಧ ಪ್ರದರ್ಶನ ಮಳಿಗೆಗಳಿೆ ಈ ಸಂದರ್ಭ ಚಾಲನೆ ನೀಡಲಾಯಿತು. ಮಳಿಗೆಯೊಂದರಲ್ಲಿ ಕುಂದಾಪುರದ ಕೊರಗ ಸಮುದಾಯ ಕುಟುಂಬಗಳಿಂದ ತಯಾರಿಸಲಾಗುವ ಬುಟ್ಟಿಯನ್ನು ಖರೀದಿಸುವ ಮೂಲಕ ಸಚಿವ ಖಾದರ್ ಪ್ರದರ್ಶನ ಮಾರಾಟ ಮಳಿಗೆಗ ಉದ್ಘಾಟನೆಯನ್ನು ನೆರವೇರಿಸಿದರು.
ಫಲ್ಗುಣಿ ನೀರಲ್ಲಿ ಸಚಿವ ಖಾದರ್ ಸ್ಪೀಡ್ ಬೋಟ್ ಪಯಣ !
ನದಿ ಉತ್ಸವದ ಅಂಗವಾಗಿ ಫಲ್ಗುಣಿ ನದಿಯಲ್ಲಿ ಪರಿಣಿತರ ಜಲಸಾಹಸ ಕ್ರೀಡೆಗಳು ನೋಡುಗರ ಕಣ್ಮನ ಸೆಳೆಯಿತು. ಸಾಹಸ ಪ್ರಿಯ ಸಚಿವ ಖಾದರ್‌ರವರು ಬಂಗ್ರಕೂಳೂರು ಜಟ್ಟಿ ಬಳಿ ಸಹಾಯಕರೊಂದಿಗೆ ಸ್ಪೀಡ್ ಬೋಟ್‌ನಲ್ಲಿ ನದಿ ನೀರಿನಲ್ಲಿ ಓಲಾಡುತ್ತಾ ಗಮನ ಸೆಳೆದರು.







