ಸ್ವಾಮಿ ವಿವೇಕಾನಂದರ ತತ್ವಾದರ್ಶ ಪಾಲಿಸಿ: ಎಸ್ಪಿ ಲಕ್ಷ್ಮೀಪ್ರಸಾದ್
ರಾಷ್ಟ್ರೀಯ ಯುವ ದಿನಾಚರಣೆ

ಮಂಗಳೂರು, ಜ.12: ಸ್ವಾಮಿ ವಿವೇಕಾನಂದರ ನುಡಿಮುತ್ತುಗಳೇ ಇಂದಿನ ಯುವ ಜನಾಂಗಕ್ಕೆ ಮಾರ್ಗದರ್ಶನವಾಗಿದ್ದು, ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ದ.ಕ. ಜಿಲ್ಲಾ ಯುವ ರೆಡ್ ಕ್ರಾಸ್ ವಿಭಾಗ ಹಾಗೂ ಮಂಗಳೂರು ವಿವಿಯ ರೆಡ್‌ಕ್ರಾಸ್ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 156ನೇ ಜನ್ಮದಿನದ ಪ್ರಯುಕ್ತ ನಗರದ ಪುರಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಯುವಕರು ವಿನಾಕಾರಣ ಮೊಬೈಲ್ ಬಳಕೆ ಮಾಡುತ್ತಾ ಸಮಯವನ್ನು ವ್ಯರ್ಥ್ಯ ಮಾಡಬಾರದು.ಬದಲಾಗಿ ಕ್ರೀಡಾ ಚಟುವಟಿಕೆ, ಪುಸ್ತಕಗಳನ್ನು ಓದುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಯ ತುಂಬ ಬೆಲೆಯುಳ್ಳದ್ದು, ಒಮ್ಮೆ ಕಳೆದು ಹೋದ ಸಮಯ ಇನ್ನೆಂದೂ ವಾಪಸಾಗುವುದಿಲ್ಲ. ಸಮಯ ಮತ್ತು ಸಾಮರ್ಥ್ಯದ ಸದ್ಬಳಕೆಯಾಗಬೇಕು ಎಂದು ಯುವ ಜನಾಂಗಕ್ಕೆ ಕಿವಿಮಾತು ಹೇಳಿದರು.
ಯುವಕರೇ ದೇಶದ ಸಂಪತ್ತು: ಭಾರತದಲ್ಲಿ ಸುಮಾರು 30 ಕೋಟಿ ವಿದ್ಯಾರ್ಥಿಗಳಿದ್ದು, ಭಾರತಕ್ಕೆ ಯುವ ಸಮುದಾಯವೇ ಸಂಪದ್ಭರಿತ ಸಂಪನ್ಮೂಲವಾಗಿದೆ. ಸಮೃದ್ಧ ಭಾರತ ನಿರ್ಮಾಣಕ್ಕೆ ಯುವಕರೇ ಭದ್ರ ಬುನಾದಿಯಾಗಿದ್ದಾರೆ. ಯುವಕರು ವಿದ್ಯಾರ್ಥಿ ಜೀವನದ ಜೊತೆಗೆ ವಿಶೇಷ ಸೃಜನಶೀಲ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಈಶ್ವರ ಪಿ. ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಎಲ್ಲ ವಿಭಾಗಗಳಲ್ಲೂ ಪ್ರಥಮ ಸ್ಥಾನವನ್ನು ಪಡೆದಿದ್ದು, ಕ್ರೀಡಾ ವಿಭಾಗದಲ್ಲಿ ಪ್ರತ್ಯೇಕ ನೀತಿಗಳನ್ನು ಅಳವಡಿಸಿಕೊಂಡಿದೆ. ಇದು ರಾಜ್ಯಕ್ಕೆ ಮಾದರಿಯಾಗಿದೆ. 2018-19ರಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ 188 ಮೆಡಲ್‌ಗಳನ್ನು ಗಳಿಸಿರುವುದು ದೊಡ್ಡ ಸಾಧನೆಯಾಗಿದೆ. ಕ್ರೀಡೆಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹೆಚ್ಚಿನ ಪ್ರಾಮುಖ್ಯತೆ, ಪ್ರೋತ್ಸಾಹ ನೀಡುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.
ಯುವಕರು ಮಾದಕ ವ್ಯಸನ ತೊರೆಯಲಿ: ಇಂದಿನ ಯುವ ಜನಾಂಗವು ಮಾದಕ ವ್ಯಸನದ ದಾಸರಾಗಿದ್ದಾರೆ. ಯುವಕರ ಕಣ್ಮಣಿ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾದಕ ವ್ಯಸನ ತೊರೆಯಲು ಸಾಧ್ಯವಾಗುತ್ತದೆ ಎಂದು ಅಂತರರಾಷ್ಟ್ರೀಯ ಕ್ರೀಡಾಪಟು ಸಹನಾಕುಮಾರಿ ಯುವ ಜನಾಂಗಕ್ಕೆ ಕಿವಿಮಾತು ಹೇಳಿದರು.
ಕ್ರೀಡೆ, ಸಿನೆಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರಾವಳಿಗರು ಮುಂಚೂಣಿಯಲ್ಲಿರುತ್ತಾರೆ. ಕರಾವಳಿಯ ಗ್ರಾಮೀಣ ಭಾಗದಲ್ಲಿ ಅತ್ಯದ್ಭುತ ಪ್ರತಿಭೆಗಳಿದ್ದು, ಪ್ರೋತ್ಸಾಹದ ಅಗತ್ಯವಿದೆ. ಜೊತೆಗೆ ಪೋಷಕರು, ಶಿಕ್ಷಕರು ಮಕ್ಕಳ ಸೃಜನಶೀಲತೆಯನ್ನು ಪೋಷಿಸಬೇಕು. ತನ್ನ ಪೋಷಕರ ಪ್ರೋತ್ಸಾಹದಿಂದ ಅಂತರರಾಷ್ಟ್ರೀಯ ಕ್ರೀಡಾಕೂಟದವರೆಗೆ ತೆರಳಲು ನನಗೆ ಸಹಕಾರಿಯಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುತ್ ಐಕಾನ್ ಅಂತರರಾಷ್ಟ್ರೀಯ ಕ್ರೀಡಾಪಟು ಸಹನಾಕುಮಾರಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ.ಎ.ಎಂ.ಖಾನ್ ಹಾಗೂ ಪ್ರೊ.ವೃಷಭರಾಜ್ ಜೈನ್ ಮಾತನಾಡಿದರು.
ಸಮಾರಂಭದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಚೇರ್‌ಮನ್ ಸಿ.ಎ.ಶಾಂತಾರಾಮ್ ಶೆಟ್ಟಿ, ಕಾರ್ಯದರ್ಶಿ ಎಸ್.ಎ. ಪ್ರಭಾಕರ ಶರ್ಮ, ಮಂಗಳೂರು ವಿವಿ ಯುತ್ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಪ್ರೊ.ವಿನೀತಾ ರೈ ಕೆ., ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕ ಸಚೇತ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೋವಿಂದದಾಸ್ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರೆಡ್ ಕ್ರಾಸ್ ಸಂಸ್ಥೆಯ ದ.ಕ. ಜಿಲ್ಲಾ ಚೇರ್‌ಮನ್ ಸಿ.ಎ.ಶಾಂತಾರಾಮ್ ಶೆಟ್ಟಿ ಸ್ವಾಗತಿಸಿದರು. ರೋಶನಿ ನಿಲಯದ ನೇಹಾ ಹನೀಫ್ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ವಿತರಣೆ: ಈ ಸಂದರ್ಭದಲ್ಲಿ ಕ್ವಿಝ್ ಹಾಗೂ ಜಾಥಾದಲ್ಲಿ ಪಾಲ್ಗೊಂಡ ಅತ್ಯುತ್ತಮ ಕಾಲೇಜು ತಂಡಗಳಿಗೆ, ಪ್ರಕೃತಿ ವಿಕೋಪದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಹಾಗೂ ಅತಿಹೆಚ್ಚು ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಅತ್ಯುತ್ತಮ ಯುವ ರೆಡ್‌ಕ್ರಾಸ್ ಘಟಕಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಸಮಾಜದ ವಿವಿಧ ಕಂಟಕಗಳಾದ ಮದ್ಯಪಾನ, ಧೂಮಪಾನ, ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸುವ ಮೈಮ್, ಕಿರುನಾಟಕ, ನೃತ್ಯಗಳಂತಹ ವಿವಿಧ ಕಾರ್ಯಕ್ರಮಗಳನ್ನು ಪುರಭವನದಲ್ಲಿ ಆಯೋಜಿಸಲಾಗಿತ್ತು. ನಗರದ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಾದಕಜಾಲ ವಿರುದ್ಧ ಜಾಗೃತಿ ಜಾಥಾ:
ಸ್ವಾಮಿ ವಿವೇಕಾನಂದರ 156ನೇ ಜನ್ಮದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಗರದ ಬಾವುಟ ಗುಡ್ಢೆಬಳಿಯಿಂದ ನಗರದ ಪುರಭವನದವರೆಗೆ ಹಮ್ಮಿಕೊಂಡ ವಿದ್ಯಾರ್ಥಿಗಳ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಭಾರತೀಯ ರೆಡ್ ಕ್ರಾಸ್ ಸಮಿತಿಯ ಅಧ್ಯಕ್ಷ ಶಾಂತರಾಮಶೆಟ್ಟಿ ಚಾಲನೆ ನೀಡಿದರು.
ಈ ಸಂದರ್ಭ ವಿವಿಧ ಶಾಲಾ-ಕಾಲೇಜುಗಳ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ವಿವಿಧ ಘೋಷಣೆಗಳ ನಾಮಫಲಕಗಳನ್ನು ಹಿಡಿದು ಜಾಥಾ ನಡೆಸಿದರು.







