ನವಮಂಗಳೂರು ಬಂದರು-ವಿಮಾನ ನಿಲ್ದಾಣದ ಖಾಸಗೀಕರಣದ ವಿರುದ್ಧ ಜನಜಾಗೃತಿ ಅಗತ್ಯ: ಸಚಿವ ಯು.ಟಿ.ಖಾದರ್
ಉಳ್ಳಾಲ ಶ್ರೀನಿವಾಸ ಮಲ್ಯ ಗೌರವ ಪ್ರಶಸ್ತಿ ಪ್ರದಾನ

ಮಂಗಳೂರು, ಜ.12: ಮಂಗಳೂರಿನ ಅಭಿವೃದ್ಧಿಯ ಹರಿಕಾರ, ದೂರದೃಷ್ಟಿಯ ರಾಜಕಾರಣಿ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ಅವರು ನಿರ್ಮಿಸಿದ ನವಮಂಗಳೂರು ಬಂದರು ಮತ್ತು ಮಂಗಳೂರು ವಿಮಾನ ನಿಲ್ದಾಣವನ್ನು ಕೇಂದ್ರ ಸರಕಾರವು ಖಾಸಗೀಕರಣ ಮಾಡಲು ಹೊರಟಿವೆ. ಇದರ ವಿರುದ್ಧ ಜನಜಾಗೃತಿ ಸೃಷ್ಟಿಸಿ ಅವುಗಳನ್ನು ಉಳಿಸುವ ಮೂಲಕ ಶ್ರೀನಿವಾಸ ಮಲ್ಯ ಅವರ ಸೇವೆಯನ್ನು ಗೌರವಿಸುವ ಅಗತ್ಯವಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ಸ್ಮಾರಕ ಕೊಡಮಾಡಲ್ಪಟ್ಟ ಜಿಲ್ಲೆಯ ಐವರು ಸಾಧಕರಿಗೆ ನಗರದ ಪುರಭವನದಲ್ಲಿ ಶನಿವಾರ ಹಮ್ಮಿಕೊಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಳ್ಳಾಲ ಶ್ರೀನಿವಾಸ ಮಲ್ಯರು ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿದ್ದರು. ಹಾಗಾಗಿಯೇ ನಾವಿಂದು ಹೊರ ಜಿಲ್ಲೆ, ರಾಜ್ಯ, ದೇಶ-ವಿದೇಶಗಳಲ್ಲಿ ಹೆಮ್ಮೆ ಪಡುವಂತಾಗಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವುದು ಸಾಧಕರಿಗೆ ಸಂದ ಗೌರವವಾಗಿದೆ. ಪ್ರಶಸ್ತಿ ಆಯ್ಕೆ ಸಮಿತಿಯು ಅರ್ಹರನ್ನೇ ಆಯ್ಕೆ ಮಾಡುವ ಮೂಲಕ ಯುವ ಜನಾಂಗಕ್ಕೆ ಮಾದರಿಯಾಗಿದೆ ಎಂದು ಖಾದರ್ ತಿಳಿಸಿದರು.
ವೈದ್ಯಕೀಯ ಕ್ಷೇತ್ರದ ಸಾಧಕ ಡಾ. ಬಿ.ಎಂ.ಹೆಗ್ಡೆ ಅವರಿಗೆ ಜೀವಮಾನದ ಸಾಧನೆಗಾಗಿ ಮತ್ತು ಪತ್ರಿಕಾ ರಂಗದ ಸಾಧಕ ಮನೋಹರ್ ಪ್ರಸಾದ್, ಸಮುದಾಯ ಶಿಕ್ಷಣ ಮತ್ತು ಸೇವಾ ರಂಗದ ಸಾಧಕ ಡಾ. ಹನಿಬಾಲ್ ಆರ್. ಕಬ್ರಾಲ್, ಸಾಹಿತ್ಯ ಕ್ಷೇತ್ರದ ಸಾಧಕಿ ಸಾರಾ ಅಬೂಬಕರ್, ಸಮಾಜ ಸೇವಾ ರಂಗದ ಸಾಧಕ ರಾಮಕೃಷ್ಣ ಆಶ್ರಮದ ಜಿತಕಾಮಾನಂದ ಜೀ ಅವರಿಗೆ ದಿ. ಉಳ್ಳಾಲ ಶ್ರೀನಿವಾಸ ಮಲ್ಯ ಗೌರವ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಹಾಗು ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಪ್ರದಾನ ಮಾಡಿ ಪ್ರಶಸ್ತಿ ವಿಜೇತರಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಯರ್ ಭಾಸ್ಕರ ಕೆ. ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಉಪಮೇಯರ್ ಮುಹಮ್ಮದ್ ಕೆ., ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾದ ಪ್ರವೀಣ್‌ಚಂದ್ರ ಆಳ್ವ, ನವೀನ್ ಆರ್. ಡಿಸೋಜ, ರಾಧಾಕೃಷ್ಣ, ಲತಾ ಸಾಲ್ಯಾನ್, ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ದಿವಾಕರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ತುಳು ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಉಪಸ್ಥಿತರಿದ್ದರು.
ಮನಪಾ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ ಸ್ವಾಗತಿಸಿದರು. ವಿಜಯ ವಿಷ್ಣು ಮಯ್ಯ ಕಾರ್ಯಕ್ರಮ ನಿರೂಪಿಸಿದರು.







