ಕನ್ನಡ ಪರಿಸರಕ್ಕೆ ಸೂಕ್ತವಾದ ಇಂಗ್ಲಿಷ್ ಮಾಧ್ಯಮ ಈ ಕಾಲದ ಅನಿವಾರ್ಯ: ನಟರಾಜ್ ಹುಳಿಯಾರ್
ಇಂಗ್ಲಿಷ್ ಮಾಧ್ಯಮ ಜಾರಿಗೆ ಪ್ರಗತಿಪರ ಒಕ್ಕೂಟ ಬೆಂಬಲ

ಬೆಂಗಳೂರು, ಜ.12: ರಾಜ್ಯ ಸರಕಾರ ಬರುವ ಶೈಕ್ಷಣಿಕ ವರ್ಷದಿಂದ ಸರಕಾರಿ ಶಾಲೆಗಳಲ್ಲಿ ಒಂದನೆಯ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸುವ ಕ್ರಮವನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ಬೆಂಬಲಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೇಖಕ ಡಾ.ನಟರಾಜ್ ಹುಳಿಯಾರ್, ಈಗಾಗಲೇ ರಾಜ್ಯದ ಅರ್ಧಕ್ಕಿಂತ ಹೆಚ್ಚು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಉನ್ನತ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಅವಕಾಶಗಳನ್ನು ಹೆಚ್ಚು ಗಳಿಸುತ್ತಿದ್ದಾರೆ. ಹೀಗಾಗಿ, ಸರಕಾರಿ ಶಾಲೆಗಳಲ್ಲಿ ಕನ್ನಡ ಪರಿಸರಕ್ಕೆ ಸೂಕ್ತವಾದ ಇಂಗ್ಲಿಷ್ ಮಾಧ್ಯಮವನ್ನು ಹಂತ ಹಂತವಾಗಿ ಜಾರಿಗೊಳಿಸುವುದು ಈ ಕಾಲದ ಅನಿವಾರ್ಯ ಎಂದು ತಿಳಿಸಿದರು.
ಮೊದಲ ಹಂತವಾಗಿ, ಪ್ರತಿ ಹೋಬಳಿಗೆ ಒಂದರಂತೆ ಸರಕಾರಿ ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆಗಳನ್ನು ಆರಂಭಿಸಬೇಕು. ಈಗಾಗಲೇ ಆರಂಭಿಸಿರುವ ಹಿರಿಯ ಪ್ರಾಥಮಿಕ ಮಟ್ಟದ ಕುವೆಂಪು ಮಾದರಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಇಂಗ್ಲಿಷ್ ಮಾಧ್ಯಮದ ಜಾರಿಯಿಂದ ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ಸಾಧ್ಯತೆ ಹೆಚ್ಚು ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಹಿಂದಿನ ಕಾಂಗ್ರೆಸ್ ಸರಕಾರ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆರನೆಯ ತರಗತಿಯಿಂದ ಎಂಟನೆಯ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸಿದ ಕಡೆಗಳಲ್ಲಿ ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ಬಿಟ್ಟು ಸರಕಾರಿ ಶಾಲೆಗಳಿಗೆ ವಾಪಸಾದ ಉದಾಹರಣೆಗಳು ರಾಜ್ಯದಲ್ಲಿವೆ. ಅಲ್ಲದೆ, ಆಂಧ್ರಪ್ರದೇಶದ ಸಕ್ಸಸ್ ಸ್ಕೂಲ್‌ಗಳಲ್ಲಿ ಈ ಸಕಾರಾತ್ಮಕ ಬೆಳವಣಿಗೆ ಕಂಡು ಬಂದಿದೆ ಎಂದು ಮಾಹಿತಿ ಹಂಚಿಕೊಂಡರು.
ಸರಕಾರಿ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗಿ ಸರಕಾರಿ ಶಾಲೆಗಳು ಮುಚ್ಚುತ್ತಿರುವುದರಿಂದ ಪ್ರಾಥಮಿಕ ಶಿಕ್ಷಣದಲ್ಲಿ ಉದ್ಯೋಗಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರ ನೇರ ಹೊಡೆತ ಗ್ರಾಮೀಣ ವಿದ್ಯಾವಂತರ ಮೇಲೆ ಬೀಳುತ್ತಿದ್ದು, ಗ್ರಾಮೀಣ ನಿರುದ್ಯೋಗ ಮತ್ತಷ್ಟು ಹೆಚ್ಚುತ್ತಿದೆ. ಈ ಕಾರಣದಿಂದ ಕೂಡ ಸರಕಾರಿ ಶಾಲೆಗಳ ಸಬಲೀಕರಣ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಸರಕಾರ ಶಾಲೆಗಳಲ್ಲಿ ಈಗ ಕಲಿಸುತ್ತಿರುವ ಇಂಗ್ಲಿಷ್ ಭಾಷಾ ಕಲಿಕೆಯ ಮಟ್ಟವನ್ನು ಇನ್ನಷ್ಟು ಕ್ರಮಬದ್ಧಗೊಳಿಸಿ ಉತ್ತಮ ಪಡಿಸಬೇಕಾಗಿದೆ. ಆ ಕಾರಣಕ್ಕಾಗಿ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳನ್ನು ಸಮರ್ಥವಾಗಿ ಬೋಧಿಸಬಲ್ಲ ಶಿಕ್ಷಕ ಶಿಕ್ಷಕಿಯರ ತರಬೇತಿಗೆ ಪ್ರತಿವರ್ಷ ಇನ್ನಷ್ಟು ಹೆಚ್ಚಿನ ಅವಧಿಯನ್ನು ಮೀಸಲಿಡಬೇಕು ಎಂದು ಸಲಹೆ ಮಾಡಿದರು.
ಖಾಸಗಿ ಹಾಗೂ ಸರಕಾರಿ ಶಾಲೆಗಳಲ್ಲಿ ಒಂದನೆಯ ತರಗತಿಯಿಂದ ಸ್ನಾತಕೋತ್ತರ ತರಗತಿವರೆಗೂ ಹಾಗೂ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ ವಿಜ್ಞಾನಗಳಂಥ ವೃತ್ತಿಪರ ಕೋರ್ಸ್‌ಗಳಲ್ಲಿ ಕನ್ನಡ ಭಾಷೆ ಅಥವಾ ಮಾತೃಭಾಷೆಯ ಕಲಿಕೆಯನ್ನು ಕಡ್ಡಾಯ ಮಾಡಬೇಕಾಗಿದೆ. ಇದು ದೇಶಭಾಷೆಗಳ ಉಳಿವಿನ ದೃಷ್ಟಿಯಿಂದ ಮಹತ್ವದ ಬೇಡಿಕೆಯಾಗಿದೆ ಎಂದರು.
ಆರ್‌ಟಿಇ ಕಾಯ್ದೆಯ ಪ್ರಕಾರ ಖಾಸಗಿ ಶಾಲೆಗಳಿಗೆ ವೆಚ್ಚ ಮಾಡುತ್ತಿರುವ ಅನುದಾನಕ್ಕೆ ಸಮಾನವಾದ ಅನುದಾನವನ್ನು ಸರಕಾರಿ ಶಾಲೆಗಳ ಕಟ್ಟಡ, ಪೀಠೋಪಕರಣ, ಕಲಿಕೆಯಲ್ಲಿ ದೃಶ್ಯ-ಶ್ರವಣ ಮಾಧ್ಯಮಗಳ ಹೆಚ್ಚಿನ ಬಳಕೆಗಾಗಿ ಮೀಸಲಿಡಲಿ ಎಂದು ಒತ್ತಾಯ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘ ಸಮಿತಿಯ ಸಂಚಾಲಕ ಮಾವಳ್ಳಿ ಶಂಕರ್, ಪ್ರಜಾ ಪರಿವರ್ತನ ವೇದಿಕೆಯ ಬಿ.ಗೋಪಾಲ್, ಸಮತಾ ಸೈನಿಕ ದಳದ ಚನ್ನಕೃಷ್ಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







