2 ತಿಂಗಳಲ್ಲಿ ಸರಕಾರಿ ಕೋಟೆ ಪ್ರೌಢಶಾಲೆ ಸಮಗ್ರ ಅಭಿವೃದ್ಧಿ: ಸಚಿವ ಝಮೀರ್ ಅಹ್ಮದ್ ಖಾನ್

ಬೆಂಗಳೂರ, ಜ.12: ಬೆಂಗಳೂರು ನಗರದ ಹಳೆಯ ಶಾಲೆಗಳಲ್ಲಿ ಒಂದಾದ ಸರಕಾರಿ ಕೋಟೆ ಪ್ರೌಢಶಾಲೆಯನ್ನು ಮುಂದಿನ ಎರಡು ತಿಂಗಳ ಒಳಗಾಗಿ ಸಮಗ್ರ ಅಭಿವೃದ್ಧಿಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಭರವಸೆ ನೀಡಿದರು.
ಶನಿವಾರ ಸರಕಾರಿ ಕೋಟೆ ಪ್ರೌಢಶಾಲೆ ಆವರಣದಲ್ಲಿರುವ ಹಿರಿಯ ಸ್ವಾತಂತ್ರ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿ ಅವರು, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿರುವ ಸರಕಾರಿ ಕೋಟೆ ಪ್ರೌಢಶಾಲೆಯನ್ನು ಸಮಗ್ರ ಅಭಿವೃದ್ಧಿಗೊಳಿಸುವುದು ಕ್ಷೇತ್ರದ ಶಾಸಕನಾಗಿ ನನ್ನ ಜವಾಬ್ದಾರಿಯೆಂದು ತಿಳಿಸಿದರು.
ಶಾಲೆಯ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗುವುದು. ಹಾಗೂ ಶಾಲೆಯ ಆವರಣದಲ್ಲಿ ಬೀಳುವ ಮಳೆ ನೀರನ್ನು ವ್ಯರ್ಥವಾಗದಂತೆ ಸಂಗ್ರಹಿಸುವ ನಿಟ್ಟಿನಲ್ಲಿ ಮಳೆ ಕೊಯ್ಲು ವ್ಯವಸ್ಥೆ ಮಾಡಲು ಈಗಾಗಲೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಶಾಲೆಯ ಆವರಣದಲ್ಲಿರುವ ಆಟದ ಮೈದಾನವನ್ನು ಸರ್ವಋತು ಆಟದ ಮೈದಾನವನ್ನಾಗಿ ಉನ್ನತೀಕರಿಸಿ ಕ್ರೀಡಾಂಗಣದ ಸುತ್ತ ಪ್ರೇಕ್ಷಕರ ಗ್ಯಾಲರಿ ನಿರ್ಮಿಸುವಂತೆ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ, ಶೀಘ್ರವೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸರಕಾರಿ ಕೋಟೆ ಪ್ರೌಢಶಾಲೆಯ ಆವರಣದಲ್ಲಿ ಈ ಮೊದಲೆ ಸಭಾಂಗಣವೊಂದಿತ್ತು. ಇದನ್ನು ಸುಸಜ್ಜಿತವಾಗಿ ದುರಸ್ಥಿ ಮಾಡಲಾಗಿದ್ದು, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೆಸರನ್ನು ಇಡಲಾಗಿದೆ. ಈ ಸಭಾಂಗಣಕ್ಕೆ ಅಗತ್ಯವಾದ ಧ್ವನಿವರ್ಧಕ ಹಾಗೂ ಆಧುನಿಕ ಸಲಕರಣೆಗಳನ್ನು ಅಳವಡಿಸಲು ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಟಿ.ಜಿ.ನರಸಿಂಹಮೂರ್ತಿ, ಚಾಮರಾಜಪೇಟೆ ಪಾಲಿಕೆ ಸದಸ್ಯೆ ಕೋಕಿಲಾ ಚಂದ್ರಶೇಖರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಹಿತೇಶ್ವರ ರೆಡ್ಡಿ ಮತ್ತಿತರರಿದ್ದರು.







