ರಾಬ್ರಿ ದೇವಿಯನ್ನು ‘ಹೆಬ್ಬೆಟ್ಟು ಒತ್ತುವ ಸಿಎಂ’ ಎಂದು ಟೀಕಿಸಿದ್ದ ಪಾಸ್ವಾನ್‌ರನ್ನು ಖಂಡಿಸಿದ ಪುತ್ರಿ

ಪಾಟ್ನ, ಜ.12: ಕೇಂದ್ರ ಸರಕಾರದ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದ ಆರ್‌ಜೆಡಿ ನಾಯಕಿ ರಾಬ್ರಿ ದೇವಿಯನ್ನು ‘ ಹೆಬ್ಬೆಟ್ಟು ಒತ್ತುವ ಮುಖ್ಯಮಂತ್ರಿ’ ಎಂದು ಅಪಹಾಸ್ಯ ಮಾಡಿದ್ದ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್‌ರನ್ನು ಅವರ ಪುತ್ರಿ ಆಶಾ ಪಾಸ್ವಾನ್ ಖಂಡಿಸಿದ್ದಾರೆ.
ತನ್ನ ಹೇಳಿಕೆಯ ಬಗ್ಗೆ ಪಾಸ್ವಾನ್ ರಾಬ್ರಿ ದೇವಿಯ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಪಾಸ್ವಾನ್‌ರ ಕಚೇರಿಯೆದುರು ಧರಣಿ ಮುಷ್ಕರ ನಡೆಸುವುದಾಗಿ ತಂದೆಯೊಂದಿಗೆ ವೈಮನಸ್ಸು ಹೊಂದಿರುವ ಆಶಾ ಪಾಸ್ವಾನ್ ಎಚ್ಚರಿಸಿದ್ದಾರೆ. “ತಂದೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿದೇವಿಯನ್ನು ಅಪಮಾನ ಮಾಡಿದ್ದಾರೆ”. ನನ್ನ ತಾಯಿ ಕೂಡಾ ಅನಕ್ಷರಸ್ತೆಯಾಗಿರುವ ಕಾರಣ ಅವರನ್ನು ತಂದೆ ದೂರ ಮಾಡಿದ್ದಾರೆ ಎಂದು ಆಶಾ ಪಾಸ್ವಾನ್ ಹೇಳಿದ್ದಾರೆ.
ಮೀಸಲಾತಿ ಮಸೂದೆಯನ್ನು ಆರ್‌ಜೆಡಿ ವಿರೋಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದ ಪಾಸ್ವಾನ್, ಅವರಿಗೆ (ಆರ್‌ಜೆಡಿ ಸದಸ್ಯರಿಗೆ) ಘೋಷಣೆ ಕೂಗುವುದು ಮತ್ತು ಹೆಬ್ಬೆಟ್ಟು ಒತ್ತುವ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವುದು ಮಾತ್ರ ಗೊತ್ತು ಎಂದು ಹೇಳಿದ್ದರು.