ಮರು ಪ್ರಯಾಣಕ್ಕೂ ಊಟ ಸಂಗ್ರಹಿಸಿಡುವ ನಿರ್ಧಾರಕ್ಕೆ ಏರ್ ಇಂಡಿಯಾ ಸಮರ್ಥನೆ
ಹೊಸದಿಲ್ಲಿ, ಜ.13: ವೆಚ್ಚ ನಿಯಂತ್ರಣದ ಸಲುವಾಗಿ ಮರುಪ್ರಯಾಣದ ಸಂದರ್ಭಕ್ಕೂ ಊಟವನ್ನು ಸಂಗ್ರಹಿಸಿಟ್ಟುಕೊಳ್ಳುವ ನಿರ್ಧಾರವನ್ನು ಏರ್ಇಂಡಿಯಾ ಸಮರ್ಥಿಸಿಕೊಂಡಿದೆ.
ವಿಮಾನಸಂಸ್ಥೆಗೆ ಆಹಾರ ಪೂರೈಸುವ ದೇಶೀಯ ಕ್ಯಾಟರಿಂಗ್ ವ್ಯವಸ್ಥೆಗಿಂತ ಅಂತರಾಷ್ಟ್ರೀಯ ಕ್ಯಾಟರಿಂಗ್ ವ್ಯವಸ್ಥೆ ದುಬಾರಿಯಾಗಿದೆ. ಆದ್ದರಿಂದ ಯುರೋಪ್ವರೆಗಿನ ಪ್ರಯಾಣದ ಸಂದರ್ಭ ಮರುಪ್ರಯಾಣಕ್ಕೂ ಅಗತ್ಯವಿರುವ ಆಹಾರವನ್ನು ಒಮ್ಮೆಗೇ ಪಡೆದು ಅವನ್ನು ಶೈತ್ಯವ್ಯವಸ್ಥೆಯಲ್ಲಿ ಶೇಖರಿಸಿಟ್ಟು ಪ್ರಯಾಣಿಕರಿಗೆ ತಾಜಾ ಆಹಾರವನ್ನು ಒದಗಿಸಲಾಗುವುದು. ಅಲ್ಲದೆ ಪ್ರಯಾಣಿಕರು ದೇಶೀಯ ಆಹಾರದ ರುಚಿಗೆ ಒಗ್ಗಿಕೊಂಡಿರುತ್ತಾರೆ . ಆದರೆ ಅಮೆರಿಕದಂತಹ ದೂರದ ರಾಷ್ಟ್ರಗಳಿಗೆ ಪ್ರಯಾಣಿಸುವ ಸಂದರ್ಭ ಮರು ಪ್ರಯಾಣಕ್ಕೆ ಅಲ್ಲಿಂದಲೇ ಆಹಾರ ಪಡೆಯಲಾಗುವುದು ಎಂದು ಏರ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಟಾಕ್ಹೋಂ, ಕಾಪನ್ಹೇಗನ್, ಮ್ಯಾಡ್ರಿಡ್ ಮುಂತಾದ ದೇಶಗಳಿಗೆ ಪ್ರಯಾಣಿಸುವ ವಿಮಾನದಲ್ಲಿ ಮರುಪ್ರಯಾಣಕ್ಕೆ ಆಹಾರವನ್ನು ಒಮ್ಮೆಗೇ ಸಂಗ್ರಹಿಸಿಟ್ಟುಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ಜನವರಿ 9ರಂದು ಏರ್ಇಂಡಿಯಾ ಆಡಳಿತ ನಿರ್ದೇಶಕ ಪ್ರದೀಪ್ಸಿಂಗ್ ಖರೋಲಾ ಸುದ್ದಿಗಾರರಿಗೆ ತಿಳಿಸಿದ್ದರು.