ಕೇಂದ್ರದಿಂದ ನ್ಯಾ. ಸಿಕ್ರಿಗೆ ಕಾಮನ್ವೆಲ್ತ್ ನ್ಯಾಯಪೀಠದ ಉಡುಗೊರೆ: ವರದಿ
ಅಲೋಕ್ ವರ್ಮಾರನ್ನು ವಜಾಗೆ ಒಪ್ಪಿಗೆ ಸೂಚಿಸಿದ್ದ ನ್ಯಾಯಮೂರ್ತಿ
ಹೊಸದಿಲ್ಲಿ,ಜ.13: ಇತ್ತೀಚೆಗೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾರನ್ನು ವಜಾಗೊಳಿಸಲು ಒಪ್ಪಿಗೆ ಸೂಚಿಸಿ ತನ್ನ ಮತ ಚಲಾಯಿಸಿದ್ದ ನ್ಯಾಯಮೂರ್ತಿ ಎ.ಕೆ ಸಿಕ್ರಿಯವರಿಗೆ ನರೇಂದ್ರ ಮೋದಿ ಸರಕಾರ ಲಂಡನ್ನಲ್ಲಿರುವ ಕಾಮನ್ವೆಲ್ತ್ ಕಾರ್ಯಾಲಯ ಮಧ್ಯಸ್ಥಿಕೆ ಮಂಡಳಿ (ಸಿಎಸ್ಎಟಿ)ಗೆ ಭಾರತದಿಂದ ನಾಮಾಂಕಿತರನ್ನಾಗಿ ಕಳುಹಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ.
ನ್ಯಾಯಮೂರ್ತಿ ಎ.ಕೆ ಸಿಕ್ರಿ 2019ರ ಮಾರ್ಚ್ 4ರಂದು ಸರ್ವೋಚ್ಚ ನ್ಯಾಯಾಲಯದಿಂದ ನಿವೃತ್ತಿ ಹೊಂದಲಿದ್ದಾರೆ. ಸಿಕ್ರಿ ಹೆಸರನ್ನು ಕಾಮನ್ ವೆಲ್ತ್ ಗೆ ಸೂಚಿಸುವುದಕ್ಕೂ ಮೊದಲು ಸರಕಾರ ಸಿಕ್ರಿ ಹಾಗೂ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರ ಒಪ್ಪಿಗೆಯನ್ನು ಪಡೆದುಕೊಂಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ. ಸಿಎಸ್ಎಟಿ ಹುದ್ದೆಗೆ ಶ್ರೀಲಂಕಾ ತನ್ನ ಪ್ರತಿನಿಧಿಯ ಹೆಸರನ್ನು ಸೂಚಿಸಲು ಮುಂದಾಗಿದ್ದ ಕಾರಣ ಸಿಕ್ರಿಯವರ ನಾಮಾಂಕಣಕ್ಕೆ ಸ್ವಲ್ಪ ಹಿನ್ನಡೆಯಾಗಿತ್ತು. ಆದರೆ ನಂತರ ಶ್ರೀಲಂಕಾ ತನ್ನ ನಿರ್ಧಾರದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಯನ್ನು ಲಂಡನ್ಗೆ ಕಳುಹಿಸಲು ದಾರಿ ಸುಗಮವಾಯಿತು ಎಂದು ದಿ ವೈರ್ ಜಾಲತಾಣ ವರದಿ ಮಾಡಿದೆ.
ಕಾಮನ್ವೆಲ್ತ್ ಕಾರ್ಯದರ್ಶಿ ಸಹಿಹಾಕಿರುವ ಯಾವುದೇ ಒಪ್ಪಂದದಿಂದ ಉಂಟಾಗುವ ತಕರಾರನ್ನು ಬಗೆಹರಿಸುವ ಉದ್ದೇಶದಿಂದ ಸಿಎಸ್ಟಿಯನ್ನು ರಚಿಸಲಾಗಿದೆ.