ಮಂಗಳೂರು: 'ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ, ಜನರ ಜೀವ ಉಳಿಸಿ' ಘೋಷಣೆಯೊಂದಿಗೆ ಕಾಂಗ್ರೆಸ್ ಪಾದಯಾತ್ರೆ

ಮಂಗಳೂರು, ಜ. 14: ಹಾಸನದಿಂದ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಅಪೂರ್ಣವಾಗಿದೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ 'ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ ಜನರ ಜೀವ ಉಳಿಸಿ' ಎಂಬ ಘೋಷಣೆಯೊಂದಿಗೆ ನೆಲ್ಯಾಡಿಯಿಂದ ಬಿ.ಸಿ.ರೋಡ್ ತನಕ ಪಾದಯಾತ್ರೆ ಆರಂಭಿಸಿದೆ.
ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಪಾದಯಾತ್ರೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ ಹೆದ್ದಾರಿಯ ಕಾಮಗಾರಿ ಪೂರ್ಣವಾಗದೆ ಇರುವುದರಿಂದ ಜನರು ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಬಿಜೆಪಿ ಕೇವಲ ಹಿಂದುತ್ವ ಮತ್ತು ದೇವರ ಫೋಟೊ ಮುಂದಿಟ್ಟು ಚುನಾವಣೆ ಎದುರಿಸಲು ರೆಡಿಯಾಗಿದೆ. ಬಿಜೆಪಿ ದೇವರು ಮತ್ತು ಹಿಂದುತ್ವದ ಹೆಸರಿನಲ್ಲಿ ಮತ ಕೇಳುತ್ತಿದ್ದರೂ ಅವರು ನೈಜ ಭಕ್ತರಲ್ಲ. ಅಭಿವೃದ್ಧಿಯನ್ನು ಮರೆತ ಬಿಜೆಪಿ ಸಂಸದರು ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕರಾದ ಜೆ ಆರ್ ಲೋಬೋ, ಶಕುಂತಳಾ ಶೆಟ್ಟಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು.







