ಮಂಗಗಳ ವರದಿ ವಿಳಂಬ: ಎರಡು ದಿನಗಳಲ್ಲಿ ಕೈಸೇರುವ ನಿರೀಕ್ಷೆ
ಮಂಗನ ಕಾಯಿಲೆ ಕುರಿತ ಸಭೆಯಲ್ಲಿ ಡಿಎಚ್‌ಒ ಡಾ.ರೋಹಿಣಿ

ಉಡುಪಿ, ಜ.14: ಕುಂದಾಪುರ ತಾಲೂಕಿನ ಕಾವ್ರಾಡಿ ಹಾಗೂ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಇಂದು ಬೆಳಗ್ಗೆ ತಲಾ ಒಂದು ಮಂಗಗಳ ಶವ ಪತ್ತೆಯಾಗುವ ಮೂಲಕ ಈವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 20 ಮಂಗಗಳ ಶವಗಳು ದೊರೆತಿದ್ದು, ಇದರಲ್ಲಿ 12 ಮಂಗಗಳ ಶವಪರೀಕ್ಷೆ ನಡೆಸಿ ವಿಸೇರಾ ವನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈಗಾಗಲೇ ವಿಳಂಬ ವಾಗಿರುವ ಇದರ ವರದಿಯು ಎರಡು ದಿನದೊಳಗೆ ಕೈಸೇರುವ ನಿರೀಕ್ಷೆ ಇದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ತಿಳಿಸಿದ್ದಾರೆ.
ಮಂಗನ ಕಾಯಿಲೆಗೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ನಡೆದ ಕಣ್ಗಾವಲು ಸಮಿತಿ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಮಂಗನ ಕಾಯಿಲೆ ಸಂಬಂಧ ಉಡುಪಿ ಜಿಲ್ಲಾ ನೋಡೆಲ್ ಅಧಿಕಾರಿಯಾಗಿ ಡಾ.ಪ್ರಶಾಂತ್ ಭಟ್ ಅವರನ್ನು ನೇಮಕ ಮಾಡಲಾಗಿದೆ. ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಕಂಟ್ರೋಲ್ ರೂಂನ್ನು ಆರಂಭಿಸಲಾಗಿದ್ದು, ಮುಂದೆ ತಾಲೂಕು ಮಟ್ಟದ ಕಂಟ್ರೋಲ್ ರೂಂಗಳನ್ನು ಕೂಡ ತೆರೆಯಲಾ ಗುವುದು ಎಂದರು.
ಮಾನವ ಮಾದರಿಯನ್ನು ಮಣಿಪಾಲ ಆಸ್ಪತ್ರೆ, ಮಂಗನ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಇನ್ನು ಹೆಚ್ಚಿನ ಪರೀಕ್ಷೆ ಬೇಕಿದ್ದರೆ ಮಾದರಿಗಳನ್ನು ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಗು ತ್ತದೆ. ಬ್ರಹ್ಮಾವರ ಖಾಸಗಿ ಆಸ್ಪತ್ರೆಯಿಂದ ಶಂಕಿತ ವ್ಯಕ್ತಿಯ ಮಾದರಿ ಪರೀಕ್ಷೆ ಯನ್ನು ಕೆಎಂಸಿಗೆ ಕಳುಹಿಸಿಕೊಡಲಾಗಿದ್ದು, ಈವರೆಗೆ ವರದಿ ಬಂದಿಲ್ಲ. ಅದೇ ರೀತಿ ಜಿಲ್ಲೆಯ ಎರಡು ಕಡೆಗಳಿಂದ ಉಣ್ಣೆಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ಮಾತನಾಡಿ, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಸೀಮಿತ ವಾಗಿರುವ ಈ ಕಾಯಿಲೆ ಜನವರಿಯಿಂದ ಜೂನ್ ತಿಂಗಳ ಮಧ್ಯಾವಧಿಯಲ್ಲಿ ಹೆಚ್ಚು ಹರಡುತ್ತವೆ. ಈ ಕಾಯಿಲೆಯಿಂದ ಶೇ.5ರಿಂದ 10ರಷ್ಟು ಮಾತ್ರ ಸಾಯುವ ಸಾಧ್ಯತೆ ಇರುತ್ತದೆ. ಈ ಕಾಯಿಲೆ ಮಕ್ಕಳಲ್ಲಿ ಕಡಿಮೆ ಹಾಗೂ ಮಹಿಳೆಯರಲ್ಲಿ ಹೆಚ್ಚು ಕಂಡು ಬರುತ್ತದೆ. ಕಾಯಿಲೆ ಪೀಡಿತ ಮಂಗ ಸತ್ತ ನಂತರ ಅದರ ಮೈಮೇಲಿದ್ದ ಉಣ್ಣೆ 60 ಮೀ. ವ್ಯಾಪ್ತಿಯಲ್ಲಿ ಬರುವ ಇತರರ ದೇಹಗಳಿಗೆ ಹರಡು ತ್ತದೆ ಎಂದು ಮಾಹಿತಿ ನೀಡಿದರು.
ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿ, ಈ ಕಾಯಿಲೆಗೆ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಅಥವಾ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಎಲ್ಲರು ಮಣಿಪಾಲ ಆಸ್ಪತ್ರೆಗೆ ಬರಬೇಕಾದ ಅವಶ್ಯಕತೆ ಇಲ್ಲ. ಶಿವಮೊಗ್ಗ ಜಿಲ್ಲೆಯ ರೋಗಿಗಳು ಬೇಡಿಕೆ ಇರಿಸಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಅಲ್ಲಿಂದ ಮಣಿಪಾಲಕ್ಕೆ ಬರಲು ಅಂಬ್ಯುಲೆನ್ಸ್‌ಗಳಲ್ಲಿ ಐದು ಗಂಟೆ ಸಮಯ ಬೇಕಾಗು ವುದರಿಂದ ಪ್ರಯಾಣದಲ್ಲಿ ರೋಗಿಗಳಿಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಆದುದರಿಂದ ಶಿವಮೊಗ್ಗ ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆ ಗಳಲ್ಲಿಯೇ ಚಿಕಿತ್ಸೆ ನೀಡುವುದು ಉತ್ತಮ ಎಂದರು.
ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರತ್ನ, ಮಣಿಪಾಲ ಆಸ್ಪತ್ರೆಯ ಎಂಸಿ ಯುಆರ್ ಪ್ರಯೋಗಾಲಯದ ಮುಖ್ಯಸ್ಥ ಡಾ.ಅರುಣ್ ಕುಮಾರ್, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಸರ್ವೋತ್ತಮ ಉಡುಪ ಉಪಸ್ಥಿತರಿದ್ದರು.
ಕೆಎಂಸಿಯಲ್ಲಿ ಸರಕಾರದಿಂದ ಉಚಿತ ಚಿಕಿತ್ಸೆ
ಮಂಗನ ಕಾಯಿಲೆ ಸಂಬಂಧ ಸರಕಾರದ ನಿರ್ದೇಶನದಂತೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲ ರೋಗಿಗಳಿಗೆ ಉಚಿತ ಚಿಕಿತ್ಸೆ ಯನ್ನು ನೀಡಲಾಗುತ್ತಿದೆ. ಇದರ ವೆಚ್ಚವನ್ನು ರಾಜ್ಯ ಸರಕಾರದ ಆರೋಗ್ಯ ಕರ್ನಾಟಕದಿಂದ ಭರಿಸಲಾಗುತ್ತದೆ ಎಂದು ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಈವರೆಗೆ ಯಾವ ರೋಗಿ ಕೂಡ ತರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಗಿಲ್ಲ. ಎಲ್ಲರು ವಾರ್ಡ್‌ಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಪುರುಷ ಹಾಗೂ ಮಹಿಳಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡ ಲಾಗಿದ್ದು, ವಿಶೇಷವಾಗಿ ಚಿಕಿತ್ಸೆ ನೀಡಲು ತಜ್ಞ ವೈದ್ಯೆ ಡಾ. ಕವಿತಾ ಶರವ್ ಅವರನ್ನು ನೇಮಕ ಮಾಡಲಾಗಿದೆ. ಕಳೆದ 48 ಗಂಟೆಗಳಲ್ಲಿ ಯಾವುದೇ ಹೊಸ ಮಂಗನ ಕಾಯಿಲೆ ಶಂಕಿತ ರೋಗಿ ಆಸ್ಪತ್ರೆಗೆ ದಾಖಲಾಗಿಲ್ಲ. ಉಡುಪಿ ಜಿಲ್ಲೆಯಿಂದ ಒಂದೇ ಒಂದು ಶಂಕಿತ ರೋಗಿ ದಾಖಲಾಗಿಲ್ಲ ಎಂದರು.
ಡಿ. 26ರಿಂದ ಈವರೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ 73 ಶಂಕಿತ ಮಂಗನ ಕಾಯಿಲೆ ರೋಗಿಗಳು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದರಲ್ಲಿ 27 ಮಂದಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಆಸ್ಪತ್ರೆಗೆ ದಾಖಲಾದವರಲ್ಲಿ 57 ಮಂದಿ ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈಗ ಚಿಕಿತ್ಸೆ ಪಡೆಯುತ್ತಿರುವ 16 ಮಂದಿಯಲ್ಲಿ 11 ಮಂದಿಗೆ ಕಾಯಿಲೆ ಇದೆ. ಇವರೆಲ್ಲ ಗುಣಮುಖರಾಗುತ್ತಿದ್ದು, ಇನ್ನೆರೆಡು ದಿನ ಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
1080 ಬಾಟಲ್ ಡಿಎಂಪಿ ಎಣ್ಣೆ ಸರಬರಾಜು
ಉಣ್ಣೆ ಕಚ್ಚದಂತೆ ಹಚ್ಚುವ ಸುಮಾರು 1000 ಡಿಎಂಪಿ ಎಣ್ಣೆಯ 60 ಎಂಎಲ್‌ನ ಬಾಟಲ್‌ಗಳನ್ನು ಈಗಾಗಲೇ ಮಂಗಗಳು ಸತ್ತ ಐದು ಕಿ.ಮೀ. ವ್ಯಾಪ್ತಿಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಅಗತ್ಯ ಇರುವ ವರಿಗೆ ವಿತರಿಸಲಾಗಿದೆ ಎಂದು ಡಾ.ರೋಹಿಣಿ ತಿಳಿಸಿದ್ದಾರೆ.
ಮುಂದೆ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳು ಹಾಗೂ ಆದಿವಾಸಿಗಳನ್ನು ಗುರುತಿಸಿ ಈ ಎಣ್ಣೆಗಳನ್ನು ವಿತರಿಸಲಾಗುತ್ತದೆ. ಶಿವಮೊಗ್ಗದಿಂದ ತರಿಸಲಾಗುವ ಈ ಎಣ್ಣೆಗೆ ಈಗ ಹೆಚ್ಚಿನ ಬೇಡಿಕೆ ಇರುವುದರಿಂದ ಉಡುಪಿಗೆ ಸರಬರಾಜು ಕಡಿಮೆ ಆಗುತ್ತಿದೆ. ಆದುದರಿಂದ ಅಗತ್ಯ ಇರುವವರಿಗೆ ಮಾತ್ರ ಈ ಎಣ್ಣೆಗಳನ್ನು ವಿತರಿಸಲಾಗುತ್ತದೆ. 120 ಬಾಟಲ್‌ಗಳು ಮೊದಲ ಹಂತದಲ್ಲಿ ಬಂದಿದ್ದು, ಎರಡನೆ ಹಂತದಲ್ಲಿ 960 ಬಾಟಲ್‌ಗಳು ಸರಬರಾಜಾಗಿವೆ ಎಂದರು.
ಸೋಮವಾರ 4 ಶವ ಪತ್ತೆ
ಸೋಮವಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು ನಾಲ್ಕು ಸತ್ತ ಮಂಗಗಳ ಶವಗಳು ಪತ್ತೆಯಾಗಿವೆ. ಕುಂದಾಪುರ ತಾಲೂಕಿನ ಬೆಳ್ವೆಯಲ್ಲಿ ಎರಡು, ಕಂಡ್ಲೂರಿನಲ್ಲಿ ಒಂದು ಹಾಗೂ ಕಾರ್ಕಳ ತಾಲೂಕಿನ ಹೊಸ್ಮಾರಿನಲ್ಲಿ ಒಂದು ಶವ ಪತ್ತೆಯಾಗಿವೆ. ಇವುಗಳಲ್ಲಿ ಬೆಳ್ವೆ ಮತ್ತು ಕಂಡ್ಲೂರಿನ ಮೂರು ಶವಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಹೊಸ್ಮಾರಿನಲ್ಲಿ ಪತ್ತೆಯಾದ ಶವದ ಪೋಸ್ಟ್‌ಮಾರ್ಟಂ ಮಾಡಿ ವಿಸೇರಾವನ್ನು ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸ ಲಾಗಿದೆ ಎಂದು ಡಿಎಚ್‌ಒ ಡಾ.ರೋಹಿಣಿ ತಿಳಿಸಿದರು.
ಇಂದು ಸಂಜೆಯ ವೇಳೆ ಶಂಕರನಾರಾಯಣ ಪಿಎಚ್‌ಸಿ ವ್ಯಾಪ್ತಿಯ ಅಂಪಾರು ನೆಲ್ಲಿಕಟ್ಟೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗನ ಶವವೊಂದು ಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕುರಿತಂತೆ ಇದುವರೆಗೆ ಯಾವುದೆ ಪ್ರಕರಣ ಪತ್ತೆಯಾಗಿಲ್ಲ. ಆದರೂ ಜಿಲ್ಲೆಯಲ್ಲಿ ಈ ರೋಗ ಹರಡುವುದನ್ನು ತಡೆಗಟ್ಟಲು ಎಲ್ಲಾ ರೀತಿಯ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಮಂಗನ ಕಾಯಿಲೆ ಕುರಿತು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಸದಾ ಜಾಗೃತರಾಗಿದ್ದು, ತುರ್ತು ಸಂದರ್ದಲ್ಲಿ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.







