ತಿಂಗಳಾದರೂ ಪತ್ತೆಯಾಗದ ‘ಸುವರ್ಣ ತ್ರಿಭುಜ’ ಬೋಟು: ತನಿಖಾ ಪ್ರಗತಿ ಶೂನ್ಯ, ಹೆಚ್ಚಿದ ಆತಂಕ

ಉಡುಪಿ, ಜ.14: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ಹೊರಟ ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ಮೀನುಗಾರರು ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿ ಜ.15ಕ್ಕೆ ಒಂದು ತಿಂಗಳು, ಈವರೆಗೆ ಯಾವುದೇ ಸುಳಿವುಗಳು ಲಭ್ಯವಾಗದಿರುವುದರಿಂದ ಕುಟುಂಬಸ್ಥರು ಹಾಗೂ ಮೀನುಗಾರರ ಆತಂಕ ಹೆಚ್ಚಿಸಿದೆ.
ಡಿ.13ರಂದು ರಾತ್ರಿ 11ಗಂಟೆ ಸುಮಾರಿಗೆ ಮಾಲಕ ಬಡಾನಿಡಿಯೂರು ಗ್ರಾಮದ ಚಂದ್ರಶೇಖರ್ ಕೋಟ್ಯಾನ್ ಸೇರಿದಂತೆ ಏಳು ಮಂದಿ ಮೀನು ಗಾರರನ್ನು ಹೊತ್ತ ಸುವರ್ಣ ತ್ರಿಭುಜ ಬೋಟು ಇತರ ಆರು ಬೋಟುಗಳ ಜೊತೆ ಆಳ ಸಮುದ್ರ ಮೀನುಗಾರಿಕೆ ಹೊರಟಿತ್ತು. ಈ ಏಳು ಬೋಟಿನವರು ಡಿ.15ರವರೆಗೆ ಪರಸ್ಪರ ವಯರ್‌ಲೆಸ್ ಸಂಪರ್ಕದಲ್ಲಿದ್ದರು. ಡಿ.15ರಂದು ರಾತ್ರಿ ಒಂದು ಗಂಟೆಗೆ ಸುವರ್ಣ ತ್ರಿಭುಜ ಬೋಟಿನವರೊಂದಿಗೆ ವುರ್‌ಲೆಸ್ ಸಂಪರ್ಕ ಮಾಡಲಾಗಿತ್ತು.
ನಂತರ ಸಂಪರ್ಕ ಕಡಿತಗೊಂಡ ಸುವರ್ಣ ತ್ರಿಭುಜ ಬೋಟು ಕಣ್ಮರೆಯಾಗಿರುವ ವಿಚಾರ ಡಿ.16ರಂದು ಬೆಳಗಿನ ಜಾವ ಆರು ಗಂಟೆ ಸುಮಾರಿಗೆ ಇತರ ಬೋಟಿನವರ ಗಮನಕ್ಕೆ ಬಂತು. ಈ ಆರು ಬೋಟಿನವರು ನಾಪತ್ತೆಯಾಗಿರುವ ಬೋಟಿಗಾಗಿ ಹುಡುಕಾಟ ನಡೆಸಿದ್ದಲ್ಲದೇ, ಇತರರಿಂದಲೂ ಮಾಹಿತಿ ಸಂಗ್ರಹಿಸಿದ್ದರು. ಆದರೆ ಎಲ್ಲೂ ಪತ್ತೆಯಾಗದಿದ್ದಾಗ ಡಿ. 22ರಂದು ಮಲ್ಪೆ ಬಂದರಿಗೆ ಈ ಕುರಿತು ಮಾಹಿತಿ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಅದೇ ದಿನ ಬೋಟಿನ ಮಾಲಕ ಚಂದ್ರಶೇಖರ್ ಕೋಟ್ಯಾನ್‌ರ ಸಹೋದರ ನಿತ್ಯಾನಂದ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನಿಂದ ಇಂದಿನವರಿಗೆ ಕೋಸ್ಟಲ್ ಸೆಕ್ಯುರಿಟಿ, ಜಿಲ್ಲಾ ಪೊಲೀಸರು, ಕರಾವಳಿ ಕಾವಲು ಪಡೆ, ನೌಕಾಪಡೆ ನಾಪತ್ತೆಯಾಗಿರುವ ಬೋಟು ಸಹಿತ ಮೀನುಗಾರರಿಗಾಗಿ ಕರ್ನಾಟಕ, ಗೋವಾ, ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಈವರೆಗೆ ಲಭ್ಯವಾಗಿಲ್ಲ. ಒಂದೆಡೆ ಸರಕಾರ ತನಿಖಾ ತಂಡ, ತಂತ್ರಜ್ಞಾನಗಳನ್ನು ಬಳಸಿ ಹುಡುಕುವ ಕೆಲಸ ಮಾಡಿದರೆ, ಇನ್ನೊಂದೆಡೆ ಮೊಗವೀರರು ತಮ್ಮ ಕುಲದೇವರು, ನಂಬಿದ ದೈವಗಳ ಮೊರೆ ಹೋಗಿ ನಮ್ಮವರು ಶೀಘ್ರವೇ ಸುರಕ್ಷಿತವಾಗಿ ಬರುವಂತೆ ಪ್ರಾರ್ಥಿಸುತ್ತಿದ್ದಾರೆ.
ನಾಪತ್ತೆಯಾಗಿರುವ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆಯ ಚಂದ್ರಶೇಖರ್ ಕೋಟ್ಯಾನ್ ಹಾಗೂ ದಾಮೋದರ್ ಸಾಲ್ಯಾನ್ ಅವರ ಮನೆ ಯವರು ಈಗಲೂ ಮನೆ ಮಕ್ಕಳನ್ನು ನೆನೆದು ಕಣ್ಣೀರಿಡುತ್ತಿದ್ದಾರೆ. ಚಂದ್ರಶೇಖರ್ ಕೋಟ್ಯಾನ್‌ರ ಪತ್ನಿ ಶ್ಯಾಮಲಾ, ದಾಮೋದರ್ ಸಾಲ್ಯಾನ್‌ರ ತಂದೆ ಸುವರ್ಣ ತಿಂಗಳಾಯ ಹಾಗೂ ತಾಯಿ ಸೀತಾ ಸಾಲ್ಯಾನ್, ಪತ್ನಿ ಮೋಹಿನಿ ಅವರ ಕಣ್ಣೀರೆ ಮಾತಾಗಿದೆ. ಮನೆ ಹಾಗೂ ಪರಿಸರದಲ್ಲಿ ದುಃಖ, ನೀರವ ಮೌನ ಆವರಿಸಿದೆ.
ಈ ಘಟನೆ ನಡೆದ ಬಳಿಕ ಮೀನುಗಾರರು ಆಳ ಸಮುದ್ರ ಮೀನುಗಾರಿಕೆಗೆ ತೆರಳಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ 20 ದಿನಗಳಿಂದ ಬಂದರಿನಲ್ಲಿ ಲಂಗರು ಹಾಕಿದ್ದ 1100 ಆಳ ಸಮುದ್ರ ಮೀನುಗಾರಿಕಾ ಬೋಟುಗಳ ಪೈಕಿ ಕಳೆದ ಎರಡು ದಿನಗಳಿಂದ ಸುಮಾರು 350 ಬೋಟುಗಳು ಸಮುದ್ರಕ್ಕೆ ಇಳಿದಿವೆ. ಬೋಟುಗಳು ಸಮುದ್ರಕ್ಕೆ ಇಳಿಯದ ಪರಿಣಾಮ ಈ ವರೆಗೆ ಕೋಟ್ಯಂತರ ರೂ. ನಷ್ಟ ಅಂದಾಜಿಸಲಾಗಿದೆ.
ಮೀನುಗಾರರು ನಾಪತ್ತೆಯಾಗಿ ತಿಂಗಳಾದರೂ ಯಾವುದೇ ಸುಳಿವು ದೊರೆತಿಲ್ಲ. ಈ ವಿಚಾರದಲ್ಲಿ ಮೀನುಗಾರರು ಹಾಗೂ ಅವರ ಕುಟುಂಬದವರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ನಾವು ಉತ್ತರ ಕೊಡುವ ಸ್ಥಿತಿಯಲ್ಲಿಲ್ಲ. ಜ. 6ರಂದು ಶಾಂತಿಯುತ ಪ್ರತಿಭಟನೆ ನಡೆಸಿದ ಮೀನುಗಾರರು ಮುಂದೆ ಉಗ್ರ ಹೋರಾಟ ನಡೆಸುವ ಸಾಧ್ಯತೆಗಳು ಕೂಡ ಇವೆ. ಆದುದರಿಂದ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು
- ಸತೀಶ್ ಕುಂದರ್, ಮೀನುಗಾರರ ಸಂಘ, ಮಲ್ಪೆ
ನಾಪತ್ತೆಯಾಗಿರುವ ಬೋಟಿನ ಸಹಿತ ಮೀನುಗಾರರಿಗಾಗಿ ಹುಡುಕಾಟ ಮುಂದುವರೆದಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಪೊಲೀಸ್ ತಂಡಗಳು ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಕೇರಳಕ್ಕೆ ತೆರಳಿದ ತಂಡ ನಿನ್ನೆಯಷ್ಟೆ ವಾಪಾಸ್ಸು ಬಂದಿದೆ. ಅಲ್ಲದೆ ನೌಕಾಪಡೆ ಹಾಗೂ ಕೋಸ್ಟ್ ಗಾರ್ಡ್ ಕೂಡ ಹುಡುಕುವ ಕೆಲಸ ಮಾಡುತ್ತಿದೆ.
-ಕುಮಾರಚಂದ್ರ, ಹೆಚ್ಚುರಿ ಪೊಲೀಸ್ ಅಧೀಕ್ಷಕ, ಉಡುಪಿ ಜಿಲ್ಲೆ







