ಡಾ. ಎಂ.ಎನ್. ರಾಜೇಂದ್ರ ಕುಮಾರ್‌ಗೆ ‘ಸಹಕಾರಿ ಭೂಷಣ’ ಪ್ರಶಸ್ತಿ
ರಜತ ಸಂಭ್ರಮದಲ್ಲಿ ಮುಖ್ಯಮಂತ್ರಿಯಿಂದ ಪ್ರಶಸ್ತಿ ಪ್ರದಾನ

ಮಂಗಳೂರು, ಜ.14: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು 25 ವರ್ಷ ಪೂರೈಸುತ್ತಿರುವ ನಿಟ್ಟಿನಲ್ಲಿ ಜ. 19ರಂದು ಆಯೋಜಿಸಲಾಗಿರುವ ‘ರಜತ ಸಂಭ್ರಮ’ ಸಮಾರಂಭದಲ್ಲಿ ಅವರಿಗೆ ಸಹಕಾರಿ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಾರಂಭದ ಅಭಿನಂದನಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಹಲವಾರು ವಿನೂತನ ಯೋಜನೆಗಳ ಮೂಲಕ ಬ್ಯಾಂಕನ್ನು ಯಶಸ್ಸಿನ ತುತ್ತ ತುದಿಗೇರಿಸಲು ಶ್ರಮಿಸಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ಗೆ ರಜತ ಸಂಭ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.
ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿನಂದನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಸತತ 25 ವರ್ಷ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವ ಸಾಧನೆ ದೇಶದಲ್ಲೇ ಪ್ರಥಮವಾಗಿದ್ದು, ಜ. 19ರಂದು ನೆಹರೂ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಉದ್ಘಾಟನಾ ಸಮಾರಂಭಕ್ಕೆ ಮುಂಚಿತವಾಗಿ ನಡೆಯಲಿರುವ ಮೆರವಣಿಗೆಯನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸುವರು. ‘ಆಕರ ಗ್ರಂಥ’ವನ್ನು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಬಿಡುಗಡೆಗೊಳಿಸುವರು. ವಿಂಶತಿ ಸ್ಮರಣ ಸಂಚಿಕೆಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಬಿಡುಡೆ ಮಾಡಲಿರುವರು. ಸಹಕಾರ ಮ್ಯೂಸಿಯಂನ್ನು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಹಾಗೂ ಸಹಕಾರ ಗ್ರಂಥಾಲಯವನ್ನು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಉದ್ಘಾಟಿಸುವರು. ಬಡವರ ಬಂಧು ಫಲಾನುಭವಿಗಳಿಗೆ ಸಾಲ ಪತ್ರ ವಿತರಣೆಯನ್ನು ಸಚಿವ ಯು.ಟಿ.ಖಾದರ್ ನೆರವೇರಿಸಲಿದ್ದಾರೆ ಎಂದು ಅವರು ವಿವರಿಸಿದರು.
ಶಾಶ್ವತ ಸಹಕಾರಿ ಮ್ಯೂಸಿಯಂ ಸ್ಥಾಪನೆ
ರಜತ ಸಂಭ್ರಮವನ್ನು ಅವಿಸ್ಮರಣೀಯವಾಗಿಸಲು ಶಾಶ್ವತ ಸಹಕಾರಿ ಮ್ಯೂಸಿಯಂ ಸ್ಥಾಪಿಸಲಾಗುತ್ತಿದ್ದು, ಮೊಳಹಳ್ಳಿ ಶಿವರಾವ್ ಅವರಿಂದ ಆರಂಭಗೊಂಡು ಇದುವರೆಗಿನ ಸಹಕಾರಿ ಕ್ಷೇತ್ರದ ಬೆಳವಣಿಗೆಯನ್ನು ಈ ಮ್ಯೂಸಿಯಂನಲ್ಲಿ ದಾಖಲಿಸಲಾಗುವುದು ಎಂದು ದೇವಿ ಪ್ರಸಾದ್ ಶೆಟ್ಟಿ ತಿಳಿಸಿದರು.
ಮ್ಯೂಸಿಯಂ ಸ್ಥಾಪನೆಗೆ ತಜ್ಞರ ಸಮಿತಿ ರಚಿಸಿ, ಈಗಾಗಲೇ ಇದರ ಕಾರ್ಯ ನಡೆಯುತ್ತಿದ್ದು, ರಜತ ಸಂಭ್ರಮದ ಪರ್ವಕಾಲದಲ್ಲಿ ಇದು ಉದ್ಘಾಟನೆಗೊ ಳ್ಳಲಿದೆ. ಇದಲ್ಲದೆ ಜಿಲ್ಲೆಯ ಸಹಕಾರಿಗಳ ಸಭೆಯಲ್ಲಿ ಚರ್ಚಿಸಲಾದಂತೆ ಸಹಕಾರಿ ಆಸ್ಪತ್ರೆ, ಸಹಕಾರಿ ಕ್ಷೇತ್ರದ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿ, ಸಹಕಾರಿ ಐಟಿ ಕೇಂದ್ರ ಸ್ಥಾಪನೆಗೆ ಸ್ಪಂದಿಸಲಾಗಿದ್ದು, ಕಾರ್ಯಗತೊಳಿಸಲು ಚಿಂತನೆ ನಡೆದಿದೆ ಎಂದರು.
ಸಹಕಾರಿ ಗ್ರಂಥಾಲಯ ಲೋಕಾರ್ಪಣೆ
ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಹುಟ್ಟು, ಬೆಳವಣಿಗೆಯ ಬಗ್ಗೆ ಸಹಕಾರಿ ಗ್ರಂಥಗಳನ್ನು ಸ್ಥಾಪಿಸಿ ಗ್ರಂಥಾಲಯ ತೆರೆಯುವ ಸೂಚನೆ ರಜತ ಸಂಭ್ರಮ ಸಮಿತಿಗೆ ಬಂದಿದ್ದು, ಬ್ಯಾಂಕ್‌ನ ಹಳೆಯ ಕಟ್ಟಡದ ಐದನೆ ಮಹಡಿಯಲ್ಲಿ ಸಹಕಾರಿ ಗ್ರಂಥಾಲಯ ರಜತ ಸಂಭ್ರಮದಂದು ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ಹೇಳಿದರು.
ರಜತ ಸಂಭ್ರಮದ ಅಂಗವಾಗಿ ಜ. 18ರಂದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಸಭಾಂಗಣದಲ್ಲಿ ‘ಸಹಕಾರ ಕ್ಷೇತ್ರ ಅಂದು- ಇಂದು- ಮುಂದು’, ‘ಸಹಕಾರ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರೋಪಾಯಗಳು’ ಎಂಬ ವಿಚಾರದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಅಭಿನಂದನಾ ಸಮಿತಿಯ ಪ್ರಮುಖರಾದ ಸವಣೂರು ಸೀತಾರಾಮ ರೈ, ಎಂ. ವಾದಿರಾಜ ಶೆಟ್ಟಿ, ಎಸ್.ಬಿ. ಜಯರಾಮ ರೈ, ರವೀಂದ್ರ ಕಂಬಳಿ, ಮೋನಪ್ಪ ಶೆಟ್ಟಿ ಎಕ್ಕಾರು, ಶಶಿಕುಮಾರ್ ರೈ ಬಾಲ್ಯೋಟ್ಟು, ಭಾಸ್ಕರ್ ಎಸ್. ಕೋಟ್ಯಾನ್, ಬಿ. ನಿರಂಜನ್, ವಿನಯ ಕುಮಾರ್ ಸೂರಿಂಜೆ, ಸದಾಶಿವ ಉಳ್ಳಾಲ್, ಸುದರ್ಶನ್ ಜೈನ್ ಹಾಗೂ ಇತರರು ಉಪಸ್ಥಿತರಿದ್ದರು.







