ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆಯಾಗಿ ಕಾಂಗ್ರೆಸ್‍ನ ದಮಯಂತಿ ಆಯ್ಕೆ

ಬಂಟ್ವಾಳ, ಜ. 14: ವಿಟ್ಲ ಪಟ್ಟಣ ಪಂಚಾಯತ್‍ನ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಕಾಂಗ್ರೆಸ್‍ನ ದಮಯಂತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿಗೆ ಬಹುಮತವಿದ್ದರೂ ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಸೋಮವಾರ ವಿಟ್ಲ ಪಟ್ಟಣ ಪಂಚಾಯತ್‍ನಲ್ಲಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಚುನಾವಣಾ ಪ್ರಕ್ರಿಯೆ ನಡೆಸಿ, ಬಳಿಕ ದಮಯಂತಿ ಅವರನ್ನು ಅಧ್ಯಕ್ಷೆಯಾಗಿ ಘೋಷಣೆ ಮಾಡಿದರು.
ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ 12 ಹಾಗೂ ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದುಕೊಂಡಿತ್ತು. ಅಧ್ಯಕ್ಷರಾಗಿ ಬಿಜೆಪಿಯ ಅರುಣ್ ಎಂ. ವಿಟ್ಲ ಆಯ್ಕೆಗೊಂಡಿದ್ದರು. ಉಪಾಧ್ಯಕ್ಷರಾಗಿ ಜಯಂತ ನಾಯ್ಕ ಅವರು ಆಯ್ಕೆಗೊಂಡಿದ್ದರು. ಇದರ ನಡುವೆ ರಾಜ್ಯ ಸರಕಾರ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಬಿ ಮೀಸಲಾತಿ ಘೋಷಣೆ ಮಾಡಿತ್ತು. ಆದರೆ, ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ ಸದಸ್ಯರಿಲ್ಲದ ಕಾರಣ ಕಾಂಗ್ರೆಸ್‍ನ ದಮಯಂತಿ ಅವರಿಗೆ ಈ ಅವಕಾಶ ಲಭಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿದೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷೆ ದಮಯಂತಿ, ವಿಟ್ಲದ ಅಭಿವೃದ್ಧಿಗಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಸದಸ್ಯೆರೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ನಿರ್ಗಮನ ಅಧ್ಯಕ್ಷ ಅರುಣ್ ಎಂ. ವಿಟ್ಲ ಮಾತನಾಡಿ, ತನ್ನ ಅಧಿಕಾರವಧಿಯಲ್ಲಿ ಎಲ್ಲರ ಸಹಕಾರದಲ್ಲಿ ವಿಟ್ಲವನ್ನು ಅಭಿವೃದ್ಧಿಪಡಿಸಲಾಗಿದೆ. ಎರಡು ವರ್ಷಗಳ ಹಿಂದೆ ವಿಟ್ಲದ ಜನತೆ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡಿದ್ದರೂ ಕೂಡಾ ಸರಕಾರದ ಮೀಸಲಾತಿಯಿಂದ ಕಾಂಗ್ರೆಸ್‍ಗೆ ಅಧ್ಯಕ್ಷ ಸ್ಥಾನ ಲಭಿಸಿದೆ ಎಂದರು.
ಬಳಿಕ ವಿಟ್ಲ ಮುಖ್ಯ ರಸ್ತೆಯಲ್ಲಿ ಕಾಂಗ್ರೆಸ್‍ನಿಂದ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭ ಪಪಂ ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ದಿವಾಕರ, ಗ್ರಾಮ ಕರಣಿಕ ಪ್ರಕಾಶ್ ಚುನಾವಣೆಗೆ ಸಹಕರಿಸಿದರು.







