ಸಂವಿಧಾನ ಉಳಿವಿಗಾಗಿ ಜನಜಾಗೃತಿ ಜನಾಂದೋಲನ: ರಿಪಬ್ಲಿಕನ್ ಪಾರ್ಟಿ ಸಂಕಲ್ಪ

ಉಡುಪಿ, ಜ.14: ದೇಶದ ಸಂವಿಧಾನದ ಉಳಿವಿಗಾಗಿ ರಾಜ್ಯಾದ್ಯಂತ ಜ.26ರಂದು ಜನಜಾಗೃತಿ ಜನಾಂದೋಲವನ್ನು ಹಮ್ಮಿಕೊಳ್ಳಲು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಸಮಿತಿ ತನ್ನ ರಾಜ್ಯ ಪದಾಧಿಕಾರಿಗಳ ಎರಡು ದಿನಗಳ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡಿದೆ ಎಂದು ಪಕ್ಷದ ರಾಜ್ಯಾದ್ಯಕ್ಷ ಆರ್.ಮೋಹನ್‌ರಾಜು ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ದಿನಗಳ ರಾಜ್ಯ ಪದಾಧಿಕಾರಿಗಳ ಸಮಾವೇಶ ಹಾಗೂ ನಾಯಕತ್ವ ಮತ್ತು ಜವಾಬ್ದಾರಿಗಳು ಕುರಿತ ತರಬೇತಿ ಶಿಬಿರ ಜ.12 ಮತ್ತು 13ರಂದು ಬ್ರಹ್ಮಾವರ ಸಮೀಪದ ಕರ್ಜೆಯಲ್ಲಿ ನಡೆಯಿತು. ರಾಜ್ಯಾದ್ಯಂತದಿಂದ 120 ಮಂದಿ ಪದಾಧಿಕಾರಿಗಳು ಇದರಲ್ಲಿ ಪಾಲ್ಗೊಂಡಿದ್ದರು ಎಂದವರು ತಿಳಿಸಿದರು.
ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಇವುಗಳಲ್ಲಿ ಜ.26ರಂದು ಸಂವಿಧಾನ ಉಳಿವಿಗಾಗಿ ಜನಜಾಗೃತಿ ಆಂದೋಲನ ಒಂದಾಗಿದೆ. ಇದರೊಂದಿಗೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲೂ ಸಭೆಗಳನ್ನು ನಡೆಸಲಾಗುತ್ತದೆ. ಶಿವಮೊಗ್ಗದಲ್ಲಿ ಫೆ.2ರಂದು, ಮಂಗಳೂರು 3, ಉಡುಪಿ 4 ಹಾಗೂ ಬಳ್ಳಾರಿಯಲ್ಲಿ ಫೆ.4ರಂದು ಸಭೆ ನಡೆಯಲಿದೆ ಎಂದರು.
ಸಂವಿಧಾನದ ಉಳಿವಿಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ರಾಷ್ಟ್ರೀಯ ನಾಯಕರಾದ ಪ್ರಕಾಶ ಅಂಬೇಡ್ಕರ್ ಅವರ ನಾಯಕತ್ವದಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಅಂತಿಮ ನಿರ್ಧಾರವನ್ನು ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು ತೆಗೆದುಕೊಳ್ಳಲಿದ್ದಾರೆ ಎಂದು ಮೋಹನ್‌ರಾಜು ತಿಳಿಸಿದರು.
ಮುಂಬರುವ ಸಾರ್ವತ್ರಿಕ ಚುನಾವಣಾ ಪೂರ್ವ ಜನಾಂದೋಲನ ರೂಪದಲ್ಲಿ ‘ಸಂವಿಧಾನ ಉಳಿಸಿ ದೇಶ ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಫೆ.20ರಂದು ಶೂದ್ರ ಹಾಗೂ ಅತಿಶೂದ್ರ ಸಮುದಾಯಗಳಿಗೆ ಅಕ್ಷರಜ್ಞಾನ ನೀಡಿದ ಮಹಾತ್ಮ ಜ್ಯೋತಿಭಾ ಪುಲೆಯವರ ಜಯಂತಿ ಪ್ರಯುಕ್ತ ಸುಮಾರು 20,000 ಶೋಷಿತ ಸಮುದಾಯವನ್ನು ಸಂಘಟಿಸಿ ಬೃಹತ್ ರ್ಯಾಲಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾಗುವುದು ಎಂದರು.
ಮನುವಾದದ ಅಳಿವು ಹಾಗೂ ಸಂವಿಧಾನದ ಉಳಿವಿಗಾಗಿ ನಿರಂತರವಾದ ಜನಾಂದೋಲದ ರ್ಯಾಲಿಯನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಶೀಘ್ರದಲ್ಲೇ ಬೆಂಗಳೂರಿಗೆ ಆಗಮಿಸುವ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚಿಸಿ ಈ ಕುರಿತು ಅಂತಿಮ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರಿಂದ ಸ್ಥಾಪನೆಗೊಂಡ ಈ ಪಕ್ಷ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಮತ್ತು ಪರಿವರ್ತನಾ ಚಳವಳಿಗೆ ಈಗಲೂ ಬದ್ಧವಾಗಿದ್ದು ಕಾರ್ಯವೆಸಗುತ್ತಿದೆ ಎಂದು ಮೋಹನ್‌ರಾಜ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ರಾಜು ಎಂ.ತಳವಾರ, ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಡಾ.ಕೆ.ಎ.ಓಬಳೇಶ, ರಾಜ್ಯ ಕಾರ್ಯದರ್ಶಿ ಶೇಖರ್ ಹಾವಂಜೆ, ವಿಶ್ವನಾಥ ಬೆಳಂಬಳ್ಳಿ, ಮಂಜುನಾಥ ಉಪಸ್ಥಿತರಿದ್ದರು.







