ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭಾರೀ ಗೋಲ್‍ಮಾಲ್: ಸಿಎಜಿ ವರದಿಯಲ್ಲಿ ಬಹಿರಂಗ

ಶಿವಮೊಗ್ಗ, ಜ. 14: ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯದಿಂದ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಹರಿಸುವ ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭಾರೀ ಗೋಲ್‍ಮಾಲ್ ನಡೆದಿರುವ ಸಂಗತಿ ಮಹಾಲೇಖಪಾಲ (ಸಿ.ಎ.ಜಿ) ರ ವರದಿಯಲ್ಲಿ ಬೆಳಕಿಗೆ ಬಂದಿದೆ.
ಕಳೆದ ವಾರ ಪೂರ್ಣಗೊಂಡ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ, ಕೇಂದ್ರ ಸರ್ಕಾರದ ಅನುದಾನದಡಿಯಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸಿದ ನೀರಾವರಿ ಯೋಜನೆಗಳಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂದು ಹೇಳಲಾಗಿದೆ. ಇದರಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಅಕ್ರಮದ ಬಗ್ಗೆಯೂ ಮಾಹಿತಿಯಿದೆ.
ಗೋಲ್‍ಮಾಲ್: ತುಂಗಾ ಮೇಲ್ದಂಡೆ ಯೋಜನೆಯಲ್ಲಿ 2014 ರ ಜೂನ್ 6 ರಿಂದ 2014 ರ ಜುಲೈ 23 ರವರೆಗೆ, ಒಟ್ಟಾರೆ ಐದು ಬಾರಿ ನಕಲಿ ಸಹಿ ಮಾಡಿ ಚೆಕ್ ಮೂಲಕ 98 ಲಕ್ಷ ರೂ. ಪಡೆಯಲಾಗಿದೆ. 2016 ಡಿಸೆಂಬರ್ ತನಕ ಇದರಲ್ಲಿ 51 ಲಕ್ಷ ರೂ. ವಸೂಲಿ ಮಾಡಲಾಗಿದೆ. ಉಳಿದ 47 ಲಕ್ಷ ರೂ. ಇನ್ನೂ ವಸೂಲಾಗಿಲ್ಲ. ಇದೇ ಯೋಜನೆಯಲ್ಲಿ ಭೂಮಿ ಸ್ವಾದೀನ ಪ್ರಕ್ರಿಯೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದನ್ನು ಸಿಎಜಿ ಪತ್ತೆ ಹಚ್ಚಿದೆ. 32 ಲಕ್ಷ ರೂ. ಪರಿಹಾರಕ್ಕೆ ಬದಲಾಗಿ 2.63 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿಸಿಕೊಂಡು ವಂಚಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಲ್ಲಿ ವಿಳಂಬವಾಗಿದ್ದಕ್ಕೆ 6.47 ಕೋಟಿ ರೂ. ದಂಡ ವಿಧಿಸಬೇಕಾಗಿತ್ತು. ಆದರೆ ಇದಕ್ಕೆ ಬದಲಾಗಿ ರಾಜ್ಯ ಸರ್ಕಾರ ಕೇವಲ 59 ಲಕ್ಷ ರೂ. ದಂಡ ವಿಧಿಸಿರುವುದನ್ನು ಸಿಎಜಿ ತನ್ನ ವರದಿಯಲ್ಲಿ ನಮೂದಿಸಿದೆ.
ತನಿಖೆ: ಕ್ಷಿಪ್ರ ನೀರಾವರಿ ಸೌಲಭ್ಯ ಯೋಜನೆ (ಎಐಬಿಪಿ) ಅಡಿಯಲ್ಲಿ ಕೇಂದ್ರ ಸರ್ಕಾರ 2008 ರಿಂದ 2017 ರ ಅವಧಿಗೆ ಕರ್ನಾಟಕದ ಬೃಹತ್, ಮಧ್ಯಮ ಹಾಗೂ ಸಣ್ಣ ನೀರಾವರಿ ಯೋಜನೆಗಳಿಗೆ ಒಟ್ಟಾರೆ 25 ಸಾವಿರ ಕೋಟಿ ರೂ. ನೆರವು ನೀಡಿದ್ದು, ಇವುಗಳಿಗೆ ಸಂಬಂಧಿಸಿದಂತೆ ಸಿಎಜಿ ತನಿಖೆ ನಡೆಸಿ ವರದಿ ನೀಡಿದೆ.







