'ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ': ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಹೇಳಿಕೆಯಲ್ಲಿ ಎಡವಟ್ಟು

ಉಡುಪಿ, ಜ.14: ಉಡುಪಿ ಜಿಲ್ಲೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ತಮ್ಮ ಅಧಿಕೃತ ಪ್ರಕಟಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಬಂದಿರುವ ಬಗ್ಗೆ ವರದಿಯಾಗಿದೆ ಎಂದು ತಿಳಿಸಿದ್ದಾರೆ.
ಅವರ ಹೇಳಿಕೆಯಲ್ಲಿ ಕುಂದಾಪುರ ತಾಲೂಕಿನ ಸಿದ್ಧಾಪುರ, ಹಳ್ಳಿಹೊಳೆ, ಹೊಸಂಗಡಿ, ಶಿರೂರು ಹಾಗೂ ಇತರ ಕಡೆಗಳಲ್ಲಿ ಮಂಗನ ಕಾಯಿಲೆ ಬಂದಿರುವುದು ವರದಿಯಾಗಿದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ವ್ಯಾಪಕವಾಗಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ಕಾಯಿಲೆ ವ್ಯಾಪಿಸದಂತೆ ತಡೆಗಟ್ಟಲು ಅಗತ್ಯವಾದ ಎಲ್ಲ ಮುಂಜಾಗ್ರತಾ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಉಡುಪಿ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಶಂಕಿತ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿಲ್ಲ. ಈ ಕುರಿತು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ ಸ್ಪಷ್ಟ ಪಡಿಸಿದ್ದರು.
ಉಸ್ತುವಾರಿ ಸಚಿವರು ಮಂಗನ ಕಾಯಿಲೆ ಸಂಬಂಧ ಜಿಲ್ಲಾಡಳಿತದಿಂದ ಸರಿಯಾದ ಮಾಹಿತಿ ಪಡೆದುಕೊಳ್ಳುವಲ್ಲಿ ಎಡವಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ತಪ್ಪು ಹೇಳಿಕೆಯ ಬಗ್ಗೆ ಸಚಿವರಿಗೆ ಅರಿವಾಗಿದ್ದು, ಸಂಬಂಧಪಟ್ಟವರು ಹೇಳಿಕೆಯನ್ನು ಸರಿಪಡಿಸಿದ್ದಾರೆ.







