ಸಚಿವ ಪುಟ್ಟರಂಗಶೆಟ್ಟಿ ಅರ್ಜಿ ವಿಚಾರಣೆ ಜ.24ಕ್ಕೆ ಮುಂದೂಡಿದ ಹೈಕೋರ್ಟ್
ವಿಧಾನಸೌಧ ಆವರಣದಲ್ಲಿ 25.76 ಲಕ್ಷ ಹಣ ಪತ್ತೆ ಪ್ರಕರಣ

ಬೆಂಗಳೂರು, ಜ.14: ವಿಧಾನಸೌಧ ಆವರಣದಲ್ಲಿ ಸಿಕ್ಕ 25.76 ಲಕ್ಷ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪುಟ್ಟರಂಗಶೆಟ್ಟಿ ತಮ್ಮ ವಿರುದ್ಧ ಮಾಧ್ಯಮಗಳು ಪ್ರಕಟಿಸುವ ಸುದ್ದಿಗಳಿಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜ.24ಕ್ಕೆ ಮುಂದೂಡಿದೆ.
ಈ ಸಂಬಂಧ ಪುಟ್ಟರಂಗಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜ.24ಕ್ಕೆ ಮುಂದೂಡಿತು. ಪ್ರಕರಣದ ಪ್ರತಿವಾದಿಗಳ ಪರ ನ್ಯಾಯಾಲಯಕ್ಕೆ ವಕೀಲ ಅಮೃತೇಶ್, ನಟರಾಜ್ ಶರ್ಮಾ ಹಾಜರಾಗಿದ್ದರು.
ಹಿನ್ನೆಲೆ ಏನು: ಸಚಿವ ಪುಟ್ಟರಂಗ ಶೆಟ್ಟಿ ತನ್ನ ವಿರುದ್ದ ಸುದ್ದಿ ಮಾಡದಂತೆ ನಿರ್ಬಂಧಿಸುವಂತೆ ಜ.8ರಂದು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಸಚಿವ ಪುಟ್ಟರಂಗಶೆಟ್ಟಿ ಮನವಿಯನ್ನು ತಿರಸ್ಕರಿಸಿ ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ನಿರ್ಬಂಧಕ್ಕೆ ನಿರಾಕರಿಸಿ, ಅರ್ಜಿ ಕುರಿತು ಕೇವಲ ಕೆಲ ಮಾಧ್ಯಮಗಳಿಗೆ ನೋಟಿಸ್ ಮಾತ್ರ ನೀಡಿತ್ತು.
ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ ಪುಟ್ಟರಂಗಶೆಟ್ಟಿ: ಪುಟ್ಟರಂಗಶೆಟ್ಟಿ ಪರ ವಕೀಲರು ತುರ್ತು ವಿಚಾರಣೆ ನಡೆಸುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಆದರೆ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ ನ್ಯಾಯಪೀಠ ವಿಚಾಣೆಯನ್ನು ಜ.24ಕ್ಕೆ ಮುಂದೂಡಿತು.







