ಮಂಗಳೂರು: ಬಾಲಯೇಸು ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

ಮಂಗಳೂರು, ಜ.14: ಬಿಕರ್ನಕಟ್ಟೆ ಕಾರ್ಮೆಲ್ ಹಿಲ್‌ನ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವದ ಸಂಭ್ರಮ ಮಂಗಳವಾರ ನಡೆಯಿತು.
ಮಂಗಳೂರು ಧರ್ಮ ಪ್ರಾಂತದ ವಿಶ್ರಾಂತ ಬಿಷಪ್ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ನೇತೃತ್ವದಲ್ಲಿ ಸಂಜೆ ಹಬ್ಬದ ಸಂಭ್ರಮದ ಬಲಿಪೂಜೆ ನಡೆಯಿತು. ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಭಕ್ತರಿಗೆ ‘ಬಾಲಯೇಸು ಧಾರಾಳವಾಗಿ ಅನುಗ್ರಹಿಸಲಿ ಹಾಗೂ ಕೃಪಾವರಗಳನ್ನು ದಯ ಪಾಲಿಸಲಿ’ ಎಂದು ಅವರು ಹಾರೈಸಿದರು.
ಕ್ರಿಸ್ತರನ್ನು ಧರಿಸೋಣ, ಪರಿಶುದ್ಧರಾಗೋಣ ಎಂಬ ಸಂದೇಶದೊಂದಿಗೆ ನಡೆದ ಮಹೋತ್ಸವದಲ್ಲಿ ಕಾರ್ಮೆಲ್ ಹಿಲ್‌ನ ಧರ್ಮಗುರು ಫಾ.ಪಿಯುಸ್ ಜೇಮ್ಸ್ ಡಿಸೋಜ ಪ್ರವಚನ ನೀಡಿದರು.
ಕ್ರಿಸ್ತರನ್ನು ಧರಿಸುವುದು ಎಂದರೆ ಯೇಸು ಕ್ರಿಸ್ತರಂತೆ ಬದುಕುವುದು ಎಂದರ್ಥ. ಯೇಸು ಕ್ರಿಸ್ತರ ಜೀವನ ರೀತಿಯನ್ನು ಅನುಸರಣೆ ಮಾಡುವುದರಿಂದ ನಮ್ಮ ಬದುಕು ಸುಂದರ ಹಾಗೂ ಸಂತೋಷಮಯವಾಗುತ್ತದೆ. ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಉತ್ತಮ ಮಾನವರಾಗಿ ಬದುಕುವ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಅವರು ಹೇಳಿದರು.
ಬಾಲಯೇಸು ಪುಣ್ಯಕ್ಷೇತ್ರದ ನಿರ್ದೇಶಕ ಫಾ.ಪ್ರಕಾಶ್ ಡಿಕುನ್ಹಾ, ಮುಖ್ಯಸ್ಥರಾದ ಫಾ.ವಿಲ್ಫ್ರೆಡ್ ರೊಡ್ರಿಗಸ್ ಮತ್ತು ಇತರ ಸುಮಾರು 100ರಷ್ಟು ಮಂದಿ ಧರ್ಮಗುರುಗಳು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮಂಗಳೂರು ನಗರ ಸೇರಿದಂತೆ ದೂರದ ಊರುಗಳಿಂದ ಅಧಿಕ ಮಂದಿ ಭಕ್ತರು ಬಾಲ ಯೇಸುವಿನ ವಾರ್ಷಿಕ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಮೊಂಬತ್ತಿಗಳನ್ನು ಉರಿಸಿ ಪ್ರಾರ್ಥಿಸಲಾಯಿತು. ಹರಕೆಗಳನ್ನು ಸಲ್ಲಿಸಿ ಬಲಿಪೂಜೆಯಲ್ಲಿ ಪಾಲ್ಗೊಂಡರು.







