ಜ.17ರಂದು ದಕ್ಷಿಣ ಭಾರತದ ಎಂಎಸ್‌ಎಂಇ ಶೃಂಗಸಭೆ
ಬೆಂಗಳೂರು, ಜ.14: ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ವತಿಯಿಂದ ದಕ್ಷಿಣ ಭಾರತದ ಎಂಎಸ್‌ಎಂಇ ಶೃಂಗಸಭೆ-2019ಯನ್ನು ಜ.17ರಂದು ಬೆಳಗ್ಗೆ 11 ಗಂಟೆಗೆ ಕಾಸಿಯಾ ಸಭಾಗಣದಲ್ಲಿ ಆಯೋಜಿಸಲಾಗಿದೆ ಎಂದು ಕಾಸಿಯಾ ಅಧ್ಯಕ್ಷ ಎಸ್.ಬಸವರಾಜ್ ಜವಳಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗಸಭೆಯನ್ನು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ ಉದ್ಘಾಟಿಸಲಿದ್ದು, ರಾಸಾಯನಿಕ ಮತ್ತು ರಸಗೊಬ್ಬರ ಅಂಕಿ-ಅಂಶಗಳ ಸಚಿವ ಡಿ.ವಿ.ಸದಾನಂದಗೌಡ, ಎಂಎಸ್‌ಎಂಇ ಕೇಂದ್ರ ರಾಜ್ಯ ಸಚಿವ ಗಿರಿರಾಜ್ ಸಿಂಗ್, ರಾಜ್ಯದ ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್ ಹಾಗೂ ಲೋಕಸಭಾ ಸದಸ್ಯ ಎಸ್.ಪಿ.ಮುದ್ದಹನುಮೇಗೌಡ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಶೃಂಗಸಭೆಯಲ್ಲಿ ಎಂಎಸ್‌ಎಂಇ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಸರಕಾರದ ವಿವಿಧ ನೀತಿ, ಕಾನೂನು ಮತ್ತು ಆದೇಶಗಳ ಸಮಗ್ರ ಮಾಹಿತಿ ಹಾಗೂ ಕುಂದು ಕೊರತೆಗಳ ಬಗ್ಗೆ ಸರಕಾರದ ಮುಂದೆ ಸಂಘಟಿತವಾಗಿ ಧ್ವನಿಗೂಡಿಸಲಾಗುತ್ತಿದ್ದು, ಉತ್ತಮ ಮೂಲಸೌಕರ್ಯ ತಂತ್ರಜ್ಞಾನ, ವ್ಯವಸ್ಥಿತ ಮಾರುಕಟ್ಟೆ ಹಾಗೂ ಅಭಿವೃದ್ಧಿ ಕುರಿತಂತೆ ಎಂಎಸ್‌ಎಂಇ ವಲಯವನ್ನು ಬೆಂಬಲಿಸಿ ಬೆಳೆಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಹಲವಾರು ಸಮೂಹಗಳಿವೆ. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇದರಲ್ಲಿ ಪ್ರಮುಖವಾಗಿದ್ದು, ಕಾಸಿಯಾದಲ್ಲಿ 115 ಅಂಗ ಸಂಸ್ಥೆಗಳನ್ನೊಳಗೊಂಡಂತೆ 10,500 ಕ್ಕೂ ಅಧಿಕ ಘಟಕಗಳು ಸದಸ್ಯತ್ವ ಹೊಂದಿವೆ, ಅಲ್ಲದೆ, ರಾಜ್ಯದಲ್ಲಿ ಅಂದಾಜು 6 ಲಕ್ಷಕ್ಕೂ ಸಣ್ಣ ಕೈಗಾರಿಕೆಗಳಿದ್ದು 40 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.







