ಜ.17ರಿಂದ ಚರ್ಮರೋಗ ತಜ್ಞರ ಸಮ್ಮೇಳನ
ಬೆಂಗಳೂರು, ಜ.14: ಬೆಂಗಳೂರು ಚರ್ಮರೋಗ ತಜ್ಞರ ಸಂಘ ಹಾಗೂ ಭಾರತೀಯ ಚರ್ಮರೋಗ ತಜ್ಞರ ಸಂಘದ ಸಹಯೋಗದಲ್ಲಿ ಜ.17ರಿಂದ 20ರವರೆಗೆ ಯಲಹಂಕದ ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಶನ್ ರೆಸಾರ್ಟ್‌ನಲ್ಲಿ ಚರ್ಮರೋಗ ತಜ್ಞರ ಅಂತರ್‌ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಡಾ.ಸತೀಶ್ ಪೈ ಮಾತನಾಡಿ, ಸಮ್ಮೇಳನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದು, ಉಪಮಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಉಪಸ್ಥಿತರಿರಲಿದ್ದಾರೆ. ಈ ಸಮ್ಮೇಳನದಲ್ಲಿ 80 ಚರ್ಮರೋಗಗಳ ಅಂತರ್‌ರಾಷ್ಟ್ರೀಯ ತಜ್ಞರು, 21 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದು, 28 ಕಾರ್ಯಾಗಾರಗಳು ನಡೆಯಲಿವೆ ಎಂದು ತಿಳಿಸಿದರು.
ಈ ಸಮ್ಮೇಳನದ ಅಂಗವಾಗಿ ಹಾಗೂ ಚರ್ಮರೋಗದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತೀಯ ಚರ್ಮರೋಗ ತಜ್ಞರ ಸಂಘದಿಂದ ಚರ್ಮರಥ ಕಾರ್ಯಕ್ರಮ ರೂಪಿಸಲಾಗಿದೆ. ಈ ಚರ್ಮರಥವು ದೇಶದ ಎಲ್ಲ ರಾಜ್ಯಗಳಲ್ಲೂ ಸಂಚರಿಸುತ್ತಿದ್ದು, ಜ.16ರಂದು ಬೆಂಗಳೂರಿಗೆ ಆಗಮಿಸಲಿದೆ. ಜ.21ರವರೆಗೆ ಬೆಂಗಳೂರಿನಲ್ಲಿ ಸಂಚರಿಸಲಿರುವ ರಥವು ಶೈಕ್ಷಣಿಕ ವಿಡಿಯೋ, ಬೀದಿ ನಾಟಕಗಳ ಮೂಲಕ ಕುಷ್ಠ ರೋಗ, ತೊನ್ನು ರೋಗಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಿದೆ ಎಂದರು.





