ಮಂಗಳೂರು: ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ

ಮಂಗಳೂರು, ಜ.14: ಶಕ್ತಿನಗರದ ಶಕ್ತಿ ಪಿಯು ಕಾಲೇಜು ಹಾಗೂ ಶಕ್ತಿ ವಸತಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಆಚರಿಸಲಾಯಿತು. ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ. ನಾಕ್ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೈಕಾಡಿ ಜನಾರ್ದನ ಆಚಾರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಸತ್ಯಾನ್ವೇಷಿಯಾಗಿದ್ದರು. ವೇದಗಳ ಹಿನ್ನೆಲೆಯಲ್ಲಿ ಸುದೃಢ ಸಮಾಜ ಹಾಗೂ ದೇಶವನ್ನು ಕಟ್ಟಲು ಸಾಧ್ಯ. ವಿದ್ಯಾರ್ಥಿಗಳು ವಿವೇಕಾನಂದರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದರು.
ವಿವೇಕಾನಂದರು ತಮ್ಮ ಪ್ರಖರ ಭಾಷಣಗಳ ಮೂಲಕ ಹಿಂದೂ ಮೌಲ್ಯಗಳತ್ತ ಪಾಶ್ಚಾತ್ಯರ ಗಮನ ಸೆಳೆಯುವ ಮೂಲಕ ಭಾರತದ ಮೇಲೆ ಪಾಶ್ಚಾತ್ಯರಿಗೆ ಗೌರವ ಮೂಡುವಂತೆ ಮಾಡಿದ್ದರು. ಸ್ವಾಮಿ ವಿವೇಕಾನಂದರು ಜಗತ್ತು ಕಂಡ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು ಎಂದರು. ರಿಂಕುಕುಮಾರಿ ಸ್ವಾಮಿ ವಿವೇಕಾನಂದರ ಕುರಿತು ಮಾತನಾಡಿದರು. ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಅಭಿವೃದ್ಧಿ ಅಧಿಕಾರಿ ನಸೀಮಾಬಾನು, ಪ್ರಧಾನ ಸಲಹೆಗಾರ ರಮೇಶ್ ಕೆ. ಉಪಸ್ಥಿತರಿದ್ದರು.
ಆರಂಭದಲ್ಲಿ ಶಾಲಾ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್. ವಂದಿಸಿದರು. ಪ್ರಿಯಾಂಕ ರೈ ಕಾರ್ಯಕ್ರಮ ನಿರೂಪಿಸಿದರು.







