ಬೇಷರತ್ ಕ್ಷಮೆಯಾಚಿಸಿದ ಪಾಂಡ್ಯ, ರಾಹುಲ್
ವಿಶೇಷ ಸಭೆ ಕರೆಯಲು ಬಿಸಿಸಿಐ ಘಟಕ ಒತ್ತಾಯ

ಹೊಸದಿಲ್ಲಿ, ಜ.14: ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಅಮಾನತಿನಲ್ಲಿರುವ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಬೇಷರತ್ ಕ್ಷಮೆಯಾಚಿಸಿದ್ದಾರೆ. ಇಬ್ಬರು ಆಟಗಾರರು ಕ್ಷಮೆ ಕೋರಿದ ಹೊರತಾಗಿಯೂ ಬಿಸಿಸಿಐನ 10 ಘಟಕಗಳು ವಿಶೇಷ ಸಾಮಾನ್ಯ ಸಭೆ(ಎಸ್‌ಜಿಎಂ)ಕರೆದು ತನಿಖೆ ನಡೆಸಲು ತನಿಖಾಕಾರಿಯನ್ನು ನೇಮಕ ಮಾಡುವಂತೆ ಬೇಡಿಕೆ ಇಟ್ಟಿವೆ. ಆಡಳಿತಾಕಾರಿ ಸಮಿತಿ(ಸಿಒಎ)ಸದಸ್ಯೆ ಡಯಾನ ಎಡುಲ್ಜಿ, ಸಿಒಎ ಹಾಗೂ ಬಿಸಿಸಿಐ ಪದಾಕಾರಿಗಳಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಹಾರ್ದಿಕ್ ಹಾಗೂ ರಾಹುಲ್ ತಮಗೆ ಲಭಿಸಿದ ಹೊಸ ಶೋಕಾಸ್ ನೋಟಿಸ್‌ಗೆ ಉತ್ತರಿಸಿದ್ದಾರೆ. ಅವರು ಬೇಷರತ್ ಕ್ಷಮೆಯಾಚಿಸಿದ್ದಾರೆ. ಬಿಸಿಸಿಐನ ಹೊಸ ಸಂವಿಧಾನದ ಪ್ರಕಾರ ತನಿಖೆ ನಡೆಸುವಂತೆ ಸಿಒಎ ಮುಖ್ಯಸ್ಥ ವಿನೋದ್ ರಾಯ್ ಸಿಇಒ ರಾಹುಲ್ ಜೊಹ್ರಿಗೆ ಸೂಚನೆ ನೀಡಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಆಸ್ಟ್ರೇಲಿಯ ಪ್ರವಾಸ ಮಧ್ಯದಲ್ಲೇ ವಾಪಸಾಗಿರುವ ಪಾಂಡ್ಯ ಹಾಗೂ ರಾಹುಲ್ ಅವರ ವೃತ್ತಿ ಭವಿಷ್ಯ ಅತಂತ್ರವಾಗಿದೆ. ವಿಶ್ವಕಪ್‌ಗೆ ಇನ್ನು 4 ತಿಂಗಳು ಬಾಕಿ ಇರುವಾಗ ಈ ಇಬ್ಬರು ಆಟಗಾರರು ಅಡಕತ್ತರಿಗೆ ಸಿಲುಕಿದ್ದಾರೆ.





