ನಡಾಲ್, ಫೆಡರರ್ ಶುಭಾರಂಭ: ಸೋಲುಂಡ ಮರ್ರೆ, ಇಸ್ನೆರ್
ಆಸ್ಟ್ರೇಲಿಯನ್ ಓಪನ್

ಮೆಲ್ಬೋರ್ನ್, ಜ.14: ವಿಶ್ವದ 2ನೇ ರ್ಯಾಂಕಿನ ಆಟಗಾರ ರಫೆಲ್ ನಡಾಲ್ ಸೋಮವಾರ ಆರಂಭವಾದ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಸ್ಪೇನ್‌ನ 17 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಎರಡು ಗಂಟೆ, 15 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ವೈಲ್ಡ್ ಕಾರ್ಡ್ ಆಟಗಾರ ಜೇಮ್ಸ್ ಡಕ್‌ವರ್ತ್ ರನ್ನು 6-4, 6-3, 7-5 ಸೆಟ್‌ಗಳ ಅಂತರದಿಂದ ಮಣಿಸಿದರು. ಫೆಡರರ್ ಗೆಲುವಿನಾರಂಭ
ಹಾಲಿ ಚಾಂಪಿಯನ್ ರೋಜರ್ ಫೆಡರರ್ ಉಜ್ಬೇಕಿಸ್ತಾನದ ಡೆನಿಸ್ ಇಸ್ಟೊಮಿನ್‌ರನ್ನು ನೇರ ಸೆಟ್‌ಗಳಿಂದ ಮಣಿಸುವುದರೊಂದಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಗೆಲುವಿನ ಆರಂಭ ಪಡೆದರು.
ಸೋಮವಾರ ಸಂಜೆ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸ್ವಿಸ್ ಸೂಪರ್‌ಸ್ಟಾರ್ ಫೆಡರರ್, ಇಸ್ಟೊಮಿನ್‌ರನ್ನು 6-3, 6-4, 6-4 ನೇರ ಸೆಟ್‌ಗಳಿಂದ ಸದೆ ಬಡಿದರು.
ಫೆಡರರ್ 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಕ್ವಾಲಿಫೈಯರ್ ಡ್ಯಾನ್ ಎವನ್ಸ್‌ರನ್ನು ಎದುರಿಸಲಿದ್ದಾರೆ.
► ಅಮೆರಿಕದ ನಂ.1 ಆಟಗಾರ ಇಸ್ನೆರ್‌ಗೆ ಸೋಲು
ಆಸ್ಟ್ರೇಲಿಯನ್ ಓಪನ್ ಮೊದಲ ದಿನದ ಅತ್ಯಂತ ದೊಡ್ಡ ಆಘಾತಕಾರಿ ಸುದ್ದಿಯೆಂದರೆ ಅಮೆರಿಕದ ನಂ.1 ಹಾಗೂ 9ನೇ ಶ್ರೇಯಾಂಕದ ಜಾನ್ ಇಸ್ನೆರ್ ಸೋಲು.
ಆರಡಿ 10 ಇಂಚು ಎತ್ತರದ ಇಸ್ನೆರ್ ತಮ್ಮದೇ ದೇಶದ ರಿಲ್ಲಿ ಒಪೆಲ್ಕೊ ವಿರುದ್ಧ 7-6(7/4), 7-6(8/6), 6-7(4/7), 7-6(7/5) ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
2014ರಲ್ಲಿ ಮೆಲ್ಬೋರ್ನ್‌ನಲ್ಲಿ ಮೊದಲ ಸುತ್ತಿನಲ್ಲಿ 106ನೇ ರ್ಯಾಂಕಿನ ಮಾರ್ಟಿನ್ ವಿರುದ್ದ ಗಾಯಗೊಂಡು ನಿವೃತ್ತಿಯಾದ ಬಳಿಕ 33ರ ಹರೆಯದ ಇಸ್ನೆರ್ ಗ್ರಾನ್‌ಸ್ಲಾಮ್‌ನ ಮೊದಲ ಪಂದ್ಯದಲ್ಲಿ ಕೆಳ ರ್ಯಾಂಕಿನ ಆಟಗಾರನಿಗೆ ಸೋತಿಲ್ಲ. ಇದೀಗ ತನಗಿಂತ 12 ವರ್ಷ ಕಿರಿಯ ಆಟಗಾರನಿಗೆ ಶರಣಾಗಿದ್ದಾರೆ.
ಇದೇ ಮೊದಲ ಬಾರಿ ಗ್ರಾನ್‌ಸ್ಲಾಮ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿರುವ ಒಪೆಲ್ಕಾ ಮುಂದಿನ ಸುತ್ತಿನಲ್ಲಿ ಇಟಲಿಯ ವಿಶ್ವದ ನಂ.102ನೇ ಆಟಗಾರ ಥಾಮಸ್ ಫ್ಯಾಬಿಯಾನೊರನ್ನು ಎದುರಿಸಲಿದ್ದಾರೆ. ಫ್ಯಾಬಿಯಾನೊ ಆಸ್ಟ್ರೇಲಿಯದ ಜೇಸನ್ ಕುಬ್ಲೆರ್‌ರನ್ನು 6-4, 7-6(7/1), 2-6, 6-3 ಅಂತರದಿಂದ ಸೋಲಿಸಿದ್ದಾರೆ.
► ಚಾಂಪಿಯನ್ ವೋಝ್ನಿಯಾಕಿ ಎರಡನೇ ಸುತ್ತಿಗೆ
ಆಸ್ಟ್ರೇಲಿಯನ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರೊಲಿನಾ ವೋಝ್ನಿಯಾಕಿ ಬೆಲ್ಜಿ ಯಂನ ಅಲಿಸನ್ ವ್ಯಾನ್ ಯುಟ್‌ವಾಂಕ್‌ರನ್ನು 6-3, 6-4 ನೇರ ಸೆಟ್‌ಗಳಿಂದ ಸೋಲಿಸಿ 2ನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಒಂದು ಗಂಟೆ, 33 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 3ನೇ ಶ್ರೇಯಾಂಕದ ಡೆನ್ಮಾರ್ಕ್ ಆಟಗಾರ್ತಿ ವೋಝ್ನಿಯಾಕಿ 24ರ ಹರೆಯದ ಅಲಿಸನ್‌ರನ್ನು ಸುಲಭವಾಗಿ ಸೋಲಿಸಿದರು. ವೋಝ್ನಿಯಾಕಿ ಮುಂದಿನ ಸುತ್ತಿನಲ್ಲಿ ಸ್ವೀಡನ್‌ನ ಜೊಹನ್ನಾ ಲಾರ್ಸನ್‌ರನ್ನು ಎದುರಿಸಲಿದ್ದಾರೆ. ಲಾರ್ಸನ್ 7-6(5), 3-0 ಮುನ್ನಡೆಯಲ್ಲಿದ್ದಾಗ ಎದುರಾಳಿ ಬೆಲಾರಸ್‌ನ ವೆರಾ ಲಾಪ್ಕೊ ಗಾಯಗೊಂಡು ನಿವೃತ್ತಿಯಾದರು.
► ಕ್ವಿಟೋವಾ 2ನೇ ಸುತ್ತಿಗೆ ಲಗ್ಗೆ
ಎರಡು ಬಾರಿ ವಿಂಬಲ್ಡನ್ ಚಾಂಪಿಯನ್ ಆಗಿರುವ ಕ್ವಿಟೋವಾ ಸ್ಲೋವಾಕಿಯದ ಮಗ್ಡೆಲೆನಾ ರಿಬಾರಿಕೊವಾ ವಿರುದ್ಧ ನೇರ ಸೆಟ್‌ಗಳಿಂದ ಜಯ ಸಾಧಿಸಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ದ್ವಿತೀಯ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಝೆಕ್‌ನ 8ನೇ ಶ್ರೇಯಾಂಕದ ಕ್ವಿಟೋವಾ ಸ್ಲೋವಾಕಿಯದ ರಿಬಾರಿಕೊವಾರನ್ನು 6-3, 6-2 ಅಂತರದಿಂದ ಸೋಲಿಸಿ ದರು.
28ರ ಹರೆಯದ ಕ್ವಿಟೋವಾ ಭರ್ಜರಿ ಫಾರ್ಮ್‌ನಲ್ಲಿದ್ದು ಕಳೆದ ವಾರ ಸಿಡ್ನಿ ಇಂಟರ್‌ನ್ಯಾಶನಲ್ ಟೂರ್ನಿ ಜಯಿಸಿದ್ದರು. ಮುಂದಿನ ಸುತ್ತಿನಲ್ಲಿ ಇರಿನಾ-ಕ್ಯಾಮೆಲಿಯಾ ಬೆಗುರನ್ನು ಎದುರಿಸಲಿದ್ದಾರೆ.
ಕ್ವಿಟೋವಾ 2012ರಲ್ಲಿ ಸೆಮಿಫೈನಲ್‌ಗೆ ತಲುಪಿದ್ದು ಅವರ ಉತ್ತಮ ಸಾಧನೆಯಾಗಿದೆ.
► ಮೊದಲ ಸುತ್ತಿನಲ್ಲೇ ಎಡವಿದ ಪ್ರಜ್ಞೇಶ್

ಚೊಚ್ಚಲ ಗ್ರಾನ್‌ಸ್ಲಾಮ್ ಟೂರ್ನಿ ಆಡಿದ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಮೊದಲ ಸುತ್ತಿನಲ್ಲಿ ಅಮೆರಿಕದ ಫ್ರಾನ್ಸಿಸ್ ಟಿಫೊಯ್ ವಿರುದ್ಧ ಸೋತಿದ್ದಾರೆ. ಹೀಗಾಗಿ ಅವರ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ನಿರಾಸೆಯೊಂದಿಗೆ ಕೊನೆಗೊಂಡಿದೆ. ಸೋಮವಾರ 1 ಗಂಟೆ, 52 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.39ನೇ ಆಟಗಾರ ಟಿಫೊಯ್ ಚೆೆನ್ನೈ ಆಟಗಾರ ಪ್ರಜ್ಞೇಶ್‌ರನ್ನು 7-6(9/7), 6-3, 6-3 ಸೆಟ್‌ಗಳ ಅಂತರದಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್ ಸವಾಲು ಎದುರಿಸಲಿದ್ದಾರೆ.
ಮೊದಲ ಸೆಟನ್ನು ಟೈ-ಬ್ರೇಕರ್‌ನಲ್ಲಿ ಗೆದ್ದ ಬಳಿಕ ಅಮೆರಿಕ ಆಟಗಾರ 106ನೇ ರ್ಯಾಂಕಿನ ಪ್ರಜ್ಞೇಶ್ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದರು. ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಅಂಕಿತಾ ರಾಣಾ ಹಾಗೂ ಕರ್ಮಾನ್ ಕೌರ್ ಮೊದಲ ತಡೆ ದಾಟಲು ವಿಫಲರಾದರು. ಈ ಇಬ್ಬರು ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 2ನೇ ಹಾಗೂ ಮೊದಲ ಸುತ್ತಿನಲ್ಲಿ ಸೋತಿದ್ದಾರೆ.







