ಸಂವಿಧಾನದ ತತ್ವದ ಸ್ಥಾನದಲ್ಲಿ ಗೋಳ್ವಾಲ್ಕರ್ ಸಿದ್ಧಾಂತ ಪ್ರತಿಷ್ಟಾಪಿಸಲು ಯತ್ನ: ತೇಜಸ್ವಿ ಯಾದವ್
ಲಕ್ನೊ, ಜ.14: ಲೋಕಸಭಾ ಚುನಾವಣೆಯ ಬಳಿಕ ಕೇಂದ್ರದಲ್ಲಿ ಯಾರು ಅಧಿಕಾರ ದಲ್ಲಿರುತ್ತಾರೆ ಎಂಬುದನ್ನು ಉ.ಪ್ರದೇಶ ಮತ್ತು ಬಿಹಾರ ನಿರ್ಧರಿಸಲಿದೆ ಎಂದು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.
ತಮ್ಮ ಪಕ್ಷವು ಉ.ಪ್ರದೇಶದಲ್ಲಿ ಬಿಎಸ್ಪಿ-ಎಸ್ಪಿ ಮೈತ್ರಿಕೂಟವನ್ನು ಬೆಂಬಲಿಸುತ್ತದೆ ಎಂದು ತೇಜಸ್ವಿ ಯಾದವ್ ಹೇಳಿದರು. ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಸಂದೇಶ ಇಡೀ ದೇಶಕ್ಕೇ ಪ್ರಸಾರವಾಗಿದೆ. ಈ ಮೈತ್ರಿಯು ದೇಶವನ್ನು ಆರೆಸ್ಸೆಸ್‌ನ ಹಿಡಿತದಿಂದ ರಕ್ಷಿಸಲಿದೆ. ಉ.ಪ್ರದೇಶ(80 ಸ್ಥಾನ), ಬಿಹಾರ(40) ಮತ್ತು ಜಾರ್ಖಂಡ್(15) ನಲ್ಲಿ ಈಗ ಬಿಜೆಪಿ ಸುಮಾರು 115 ಸ್ಥಾನ ಗಳಿಸಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಈ ಮೂರು ರಾಜ್ಯಗಳಲ್ಲಿ ಬಿಜೆಪಿ 100 ಸ್ಥಾನ ಕಳೆದುಕೊಳ್ಳಲಿದೆ ಎಂದರು.
ವೈಯಕ್ತಿಕ ಹಿತಾಸಕ್ತಿಯ ರಕ್ಷಣೆಯ ಏಕೈಕ ಉದ್ದೇಶದಿಂದ ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳಿಗೆ ಹಾನಿ ಎಸಗಲಾಗುತ್ತಿದೆ. ಅಲ್ಲದೆ ಸಂವಿಧಾನದ ತತ್ವದ ಸ್ಥಾನದಲ್ಲಿ ಗೋಳ್ವಾಲ್ಕರ್ (ಆರೆಸ್ಸೆಸ್ ಮುಖಂಡ) ಸಿದ್ಧಾಂತವನ್ನು ಪ್ರತಿಷ್ಟಾಪಿಸಲು ಪ್ರಯತ್ನ ಸಾಗುತ್ತಿದೆ ಎಂದು ದೂರಿದರು. 13 ವರ್ಷದವನಿದ್ದಾಗಲೇ ತನ್ನ ವಿರುದ್ಧ ಹಾಗೂ ಕುಟುಂಬದ ಎಲ್ಲಾ ಸದಸ್ಯರ ವಿರುದ್ಧ ಸಿಬಿಐ ಮತ್ತು ಇಡಿ ಪ್ರಕರಣ ದಾಖಲಿಸಿತ್ತು. ಆದರೆ ತಾವು ರಾಜಿ ಮಾಡಿಕೊಳ್ಳಲು ಇಚ್ಚಿಸದೆ ಈ ಷಡ್ಯಂತ್ರ್ಯದ ವಿರುದ್ಧ ಹೋರಾಡಲು ನಿರ್ಧರಿಸಿದ್ದೇವೆ . ನಕಾರಾತ್ಮಕ ಪ್ರಚಾರದಿಂದ ವಿಪಕ್ಷಗಳ ಪ್ರತಿಷ್ಟೆಗೆ ಘಾಸಿ ಎಸಗಲು ಸರಕಾರ ಪ್ರಯತ್ನಿಸುತ್ತಿದೆ. ಆದರೆ ಇದಕ್ಕೆ ಈ ಬಾರಿಯ ಚುನಾವಣೆಯಲ್ಲಿ ಸೂಕ್ತ ಉತ್ತರ ದೊರಕಲಿದೆ ಎಂದವರು ಹೇಳಿದರು.
ಬಿಹಾರ ಹಾಗೂ ದೇಶದ ಇತರೆಡೆಯೂ ವಿಪಕ್ಷಗಳು ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಉಳಿಗಾಲವಿಲ್ಲ ಎಂದು ತೇಜಸ್ವಿ ಹೇಳಿದರು. ಬಿಎಸ್ಪಿ ಮುಖಂಡೆ ಮಾಯಾವತಿ ಹಿರಿಯರಾಗಿದ್ದು ಅವರಿಗೆ ಜನ್ಮದಿನದ ಶುಭಾಷಯ ಸಲ್ಲಿಸಲು ತಾನು ಬಂದಿರುವುದಾಗಿ ತೇಜಸ್ವಿ ತಿಳಿಸಿದ್ದಾರೆ. ಬಳಿಕ ತಾನು ಮಾಯಾವತಿಯ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತಿರುವ ಚಿತ್ರವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಇದೇ ಸಂದರ್ಭ ಮಾತನಾಡಿದ ಎಸ್ಪಿ ಮುಖಂಡ ಅಖಿಲೇಶ್ ಯಾದವ್, ಇಡೀ ದೇಶವೇ ಈಗ ಬಿಜೆಪಿಯ ಬಗ್ಗೆ ಭ್ರಮನಿರಸನಗೊಂಡಿದೆ. ಬಿಜೆಪಿ ಮಾಡಿರುವ ಮೋಸವನ್ನು ಜನತೆ ಅರಿತುಕೊಂಡಿದ್ದಾರೆ ಎಂದು ಹೇಳಿದರು.