ಗಾಂಧೀಜಿ ವಿಚಾರಧಾರೆಗಳು ಇಂದಿಗೂ ಪ್ರಸ್ತುತ: ಬಿ.ಎಲ್.ಶಂಕರ್
ಕೊಪ್ಪ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕೊಪ್ಪ,ಜ.14: ಅಧಿಕಾರ ರಾಜಕಾರಣದಿಂದ ದೂರ ಇದ್ದು ಸಮಾಜಕ್ಕಾಗಿ ತನ್ನ ಜೀವಮಾನವನ್ನು ಮುಡುಪಾಗಿಟ್ಟ ಗಾಂಧೀಜಿ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.
ಭಾನುವಾರ ತಾಲ್ಲೂಕಿನ ಕಮ್ಮರಡಿಯಲ್ಲಿ ನಡೆಯುತ್ತಿರುವ ಕೊಪ್ಪ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಗಾಂಧಿಯಾನ ಗೋಷ್ಠಿಯಲ್ಲಿ ಪಾಲ್ಗೊಂಡು ಕನ್ನಡ ಸಾಹಿತ್ಯ ಮತ್ತು ರಾಜಕಾರಣದ ಮೇಲೆ ಗಾಂಧಿ ಚಿಂತನೆಯ ಪ್ರಭಾವ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು.
ಶಾಂತಿಗಾಗಿ ನೊಬೆಲ್ ಪ್ರಶಸ್ತಿಯನ್ನು ಗಾಂಧೀಜಿಯವರಿಗೆ ಕೊಡಬೇಕಿತ್ತು. ಆದರೆ ಕೊಡದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ಏಕೈಕ ಪ್ರಕರಣ ಗಾಂಧೀಜಿಗೆ ನೊಬೆಲ್ ಕೊಡದೇ ಇರುವುದಕ್ಕೆ. ಅದೇ ರೀತಿ ಯಾವುದೇ ರಾಜಕೀಯ ಪದವಿ ಇಲ್ಲದೇ ಮರಣ ಹೊಂದಿದಾಗ ವಿಶ್ವಸಂಸ್ಥೆಯಲ್ಲಿ ಎಲ್ಲಾ ದೇಶಗಳ ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸೂಚಿಸಿದ್ದರೆ ಅದು 1948ರಲ್ಲಿ ಗಾಂಧೀಜಿ ನಿಧನರಾದಾಗ ಎಂಬುದು ಉಲ್ಲೇಖನೀಯ.
ಜಗತ್ತಿನ ಎಲ್ಲಾ ಲಿಪಿಯಿರುವ ಭಾಷೆಗಳಲ್ಲಿ ಗಾಂಧಿಯ ಕುರಿತು ಲೇಖನಗಳು ಬಂದಿದ್ದರೆ, 250ಕ್ಕೂ ಹೆಚ್ಚು ವಿಶ್ವ ವಿದ್ಯಾಲಯಗಳಲ್ಲಿ ಗಾಂಧಿ ವಿಚಾರದ ಬಗ್ಗೆ ಪುಸ್ತಕಗಳು ಇದ್ದರೆ, 32,000 ಶೀರ್ಷಿಕೆಗಳಲ್ಲಿ ಗಾಂಧೀಜಿಯ ಕುರಿತು ಲೇಖನಗಳು ಪ್ರಕಟವಾಗಿದ್ದರೆ ಅದಕ್ಕೆ ಕಾರಣ ಅವರು ನಿಜವಾದ ಸಂತನಾಗಿದ್ದುದಾಗಿದೆ. ಎಲ್ಲಿವರೆಗೆ ಜನ ಇರುತ್ತಾರೆ ಅಲ್ಲಿವರೆಗೆ ಗಾಂಧೀಜಿ ಪ್ರಸ್ತುತವಾಗಿರುತ್ತಾರೆ. ಮುಂದಿನ ಪೀಳಿಗೆಗೂ ಅವರನ್ನು ಪರಿಚಯಿಸುವ ಕಾರ್ಯಕ್ರಮ ಈ ರೀತಿಯ ಕಾರ್ಯಕ್ರಮಗಳಿಂದ ಆಗಬೇಕು ಎಂದರು.
ಮಾಜಿ ಶಾಸಕ ವೈ.ಎಸ್.ವಿ. ದತ್ತ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕಾವ್ಯದಲ್ಲಿ ಗಾಂಧೀ ಚಿಂತನೆಯ ತಿರುಳು ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿ, ವಾಲ್ಮೀಕಿ ರಾಮಾಯಣಕ್ಕೂ ಕುವೆಂಪು ಬರೆದ ರಾಮಾಯಣಕ್ಕೂ ಏನಾದರೂ ವ್ಯತ್ಯಾಸ ಕಂಡು ಬಂದಿದ್ದರೆ ಅದಕ್ಕೆ ಕುವೆಂಪುರವರ ಮೇಲೆ ಗಾಂಧೀಜಿಯವರ ಪ್ರಭಾವವೇ ಕಾರಣ. ಕೇವಲ ಪುರೋಹಿತಶಾಹಿಗೆ ಸೀಮಿತವಾಗಿದ್ದ ಸಾಹಿತ್ಯ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅದೂ ಸಹ ರಾಮಾಯಣ ಮಹಾಭಾರತದ ಬಗ್ಗೆ ಬ್ರಾಹ್ಮಣರೂ ಬಿಟ್ಟು ಬೇರೆ ಯಾರೂ ಬರೆಯಲಾಗದು ಎಂಬ ಸಂದರ್ಭದಲ್ಲೇ ಕುವೆಂಪುರವರು ಶ್ರೀರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನು ರಚಿಸಿದ್ದು ಸಾಕ್ಷಿಯಾಗಿದೆ. ಇಂದಿನ ಕಾಲಮಾನಕ್ಕೆ ತಕ್ಕಂತೆ ವೈಚಾರಿಕ ನೆಲೆಗಟ್ಟಿನಲ್ಲಿ ರಾಮಾಯಣ ರಚಿಸಿದ್ದು ವಿಶೇಷ. ರಾವಣನ ಕೊಂದ ಬಳಿಕ ರಾಮ ರಾವಣನಿಗೆ ನೀಡುವ ಗೌರವ ಕುವೆಂಪುರವರು ರಚಿಸಿದ ರಾಮಾಯಣ ದರ್ಶನಂ ರಚನೆಗೆ ಗಾಂಧೀಜಿಯ ಪ್ರಭಾವವನ್ನು ಸ್ಪಷ್ಟವಾಗಿ ಸಾಕ್ಷೀಕರಿಸುತ್ತದೆ ಎಂದರು.
ಕುವೆಂಪು ವಿವಿ ಉಪಕುಲಪತಿ ಜೋಗನ್ ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಯು.ಎಸ್.ಶಿವಪ್ಪ, ಲಕ್ಷ್ಮೀಕಾಂತ್, ಜಿ.ಎಸ್. ನಟರಾಜ್, ಈ.ಎಸ್. ಧರ್ಮಪ್ಪ, ಎಚ್.ಕೆ. ಸುರೇಶ್, ಎನ್.ಎಸ್. ಸುರೇಂದ್ರ, ಕೆ.ಪಿ. ಕೃಷ್ಣಮೂರ್ತಿ ಮುಂತಾದವರು ಉಪಸ್ಥತರಿದ್ದರು.







