ಹೆರಿಗೆ ಸಂದರ್ಭ ಶಿಶುವಿನ ತಲೆ ತುಂಡು: ರಾಜಸ್ಥಾನ ಸರಕಾರಕ್ಕೆ ಎನ್ಎಚ್ಆರ್ಸಿ ನೋಟಿಸ್

ಹೊಸದಿಲ್ಲಿ, ಜ. 15: ಸರಕಾರಿ ಆರೋಗ್ಯ ಕೇಂದ್ರದ ಪುರುಷ ನರ್ಸ್ಗಳು ಮಹಿಳೆಯೊಬ್ಬರ ಹೆರಿಗೆ ಶಸ್ತ್ರಚಿಕಿತ್ಸೆ ಸಂದರ್ಭ ಮಗುವನ್ನು ಎಳೆದ ಪರಿಣಾಮ ಶಿಶುವಿನ ತಲೆ ತುಂಡಾದ ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜಸ್ಥಾನ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.
ಜೈಸಲ್ಮಾರ್ನ ರಾಮಗಢದಲ್ಲಿ ಈ ಘಟನೆ ನಡೆದಿತ್ತು. ಹೆರಿಗೆ ಸಂದರ್ಭ ಇಬ್ಬರು ಪುರುಷ ನರ್ಸ್ಗಳು ಮಗುವನ್ನು ಎಳೆದ ಪರಿಣಾಮ ಮಗುವಿನ ಕಾಲಿಗೆ ಹಾನಿಯಾಗಿದೆ ಹಾಗೂ ಪಿತ್ತಕೋಶ ಛಿದ್ರವಾಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗಗೊಳಿಸಿದೆ.
ಈ ಇಬ್ಬರು ಆರೋಪಿಗಳು ಮಗುವಿನ ಕೆಳಗಿನ ಭಾಗವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದರು ಹಾಗೂ ಮಹಿಳೆಯನ್ನು ಜೈಸಲ್ಮಾರ್ಗೆ ಕರೆದೊಯ್ಯುವಂತೆ ಆಕೆಯ ಕುಟುಂಬದವರಲ್ಲಿ ತಿಳಿಸಿದ್ದರು.
ಜನವರಿ 6ರಂದು ನಡೆದ ಹೆರಿಗೆ ಶಸ್ತ್ರಚಿಕಿತ್ಸೆ ಸಂದರ್ಭ ಕುಡಿದಿದ್ದರು ಎಂಬ ಮಹಿಳೆಯ ಪತಿಯ ಆರೋಪಿಸಿದ್ದರೂ ನರ್ಸ್ಗಳಾದ ಅಮೃತ್ಲಾಲ್ ಹಾಗೂ ಜುಂಝಾರ್ ಸಿಂಗ್ನನ್ನು ಇನ್ನಷ್ಟೆ ಬಂಧಿಸಬೇಕಾಗಿದೆ. ಆದರೆ, ಅವರನ್ನು ಅಮಾನತುಗೊಳಿಸಲಾಗಿದೆ. ಆರೋಗ್ಯ ಕೇಂದ್ರದ ಉಸ್ತುವಾರಿ ಡಾ. ನಿಖಿಲ್ ಶರ್ಮಾ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ನಮಗೆ ಮಗುವಿನ ರುಂಡ, ಮುಂಡ ಹಾಗೂ ಮಾಸು ಚೀಲ ಹೀಗೆ ಮೂರು ತುಂಡುಗಳು ದೊರಕಿದ್ದವು ಎಂದು ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಸುರೇಂದ್ರ ದುಗ್ಗಾರ್ ತಿಳಿಸಿದ್ದಾರೆ.