ನ್ಯಾಯಮೂರ್ತಿಗಳ ನೇಮಕ ವಿಚಾರ: ಸುಪ್ರೀಂಕೋರ್ಟ್ನಲ್ಲಿ ಮತ್ತೆ ಹೊಗೆಯಾಡಿದ ವಿವಾದ

ಹೊಸದಿಲ್ಲಿ, ಜ.16: ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸಿಜೆಐ ನೇತೃತ್ವದ ಕೊಲಿಜಿಯಂ ತನ್ನ ನಿರ್ಧಾರವನ್ನು ದಿಢೀರ್ ಬದಲಿಸಿದ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿ, ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದು, ದೇಶದ ಅತ್ಯುನ್ನತ ಕೋರ್ಟ್ನಲ್ಲಿ ಮತ್ತೆ ವಿವಾದ ಹೊಗೆಯಾಡಿದೆ.
ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರದೀಪ್ ನಂದ್ರಾಜೋಗ್ ಮತ್ತು ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಭಡ್ತಿ ನೀಡುವಂತೆ ಶಿಫಾರಸು ಮಾಡಲು ಕೊಲಿಜಿಯಂ ಮೊದಲು ನಿರ್ಧರಿಸಿತ್ತು. ಆದರೆ ಈ ನಿರ್ಧಾರವನ್ನು ದಿಢೀರ್ ಬದಲಿಸಿ ಕರ್ನಾಟಕದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ದಿಲ್ಲಿ ಹೈಕೋರ್ಟ್ನ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಹೆಸರು ಶಿಫಾರಸು ಮಾಡಿರುವುದು ವಿವಾದಕ್ಕೆ ಕಾರಣ.
ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಐವರು ಕೊಲಿಜಿಯಂ ದಿಢೀರ್ ನಿರ್ಧಾರ ಬದಲಿಸಿರುವ ಬಗ್ಗೆ ಹಲವು ಮಂದಿ ಸುಪ್ರೀಂ ನ್ಯಾಯಾಧೀಶರು ಗರಂ ಆಗಿದ್ದಾರೆ. ಸಾಂಸ್ಥಿಕ ನಿರ್ಧಾರಗಳನ್ನು ಸಂರಕ್ಷಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ಆರಂಭವಾಗಿದೆ ಎಂದು ತಿಳಿದುಬಂದಿದೆ. ನಿರ್ಧಾರ ಕೈಗೊಳ್ಳುವಲ್ಲಿ ನಿರಂತರತೆ ಕಾಪಾಡಬೇಕು ಹಾಗೂ ಕೊಲಿಜಿಯಂ ಸದಸ್ಯರ ವೈಯಕ್ತಿಕ ಆದ್ಯತೆಗೆ ಅನುಗುಣವಾಗಿ ಶಿಫಾರಸು ಮಾಡಲಾಗುತ್ತದೆ ಎಂಬ ಭಾವನೆ ಬರದಂತೆ ನೋಡಿಕೊಳ್ಳಬೇಕು ಎನ್ನುವುದು ಇವರ ಅಭಿಮತ. ನ್ಯಾಯಮೂರ್ತಿ ಸಂಜಯ್ ಕೌಲ್ ಈಗಾಗಲೇ ತಮ್ಮ ಆಕ್ಷೇಪಣೆ ಪತ್ರವನ್ನು ಸಿಜೆಐಯವರಿಗೆ ಬರೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಡಿಸೆಂಬರ್ 12ರಂದು ನಡೆದ ಕೊಲಾಜಿಯಂ ಸಭೆಯಲ್ಲಿ ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್, ಮದನ್ ಬಿ. ಲೋಕೂರ, ಎ.ಕೆ.ಸಿಕ್ರಿ, ಎಸ್.ಎ.ಬೋಬ್ಡೆ ಹಾಗೂ ಎನ್.ವಿ.ರಮಣ ಪಾಲ್ಗೊಂಡಿದ್ದರು ಹಾಗೂ ನಂದ್ರಾಜೋಗ್ ಹಾಗೂ ಮೆನನ್ ಆಯ್ಕೆಗೆ ಶಿಫಾರಸು ಮಾಡಲು ನಿರ್ಧರಿಸಿದ್ದರು. ಇದಕ್ಕೆ ಐವರು ಸಹಿ ಮಾಡಿದ್ದರು. ಆದರೆ ಈ ಶಿಫಾರಸು ಪತ್ರ ರಾಷ್ಟ್ರಪತಿ ಕಚೇರಿಗೆ ತಲುಪುವ ಮುನ್ನವೇ ಮಾಧ್ಯಮಗಳಿಗೆ ಸೋರಿಕೆಯಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಪುನರ್ ಪರಿಶೀಲಿಸಲು ಸಿಜೆಐ ನಿರ್ಧರಿಸಿ, ಜನವರಿ 5 ಹಾಗೂ 6ರಂದು ಸಭೆ ನಡೆಸಲು ನಿರ್ಧರಿಸಿತ್ತು.
ಈ ಮಧ್ಯೆ ನ್ಯಾಯಮೂರ್ತಿ ಲೋಕೂರ್ ನಿವೃತ್ತರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನ್ಯಾಯಮೂರ್ತಿ ಅರುಣ್ ಮಿಶ್ರಾ ಕೊಲಿಜಿಯಂ ಸೇರಿದ್ದರು. ಈ ಸಭೆಯಲ್ಲಿ ಹೆಸರುಗಳನ್ನು ಬದಲಿಸಲು ನಿರ್ಧರಿಸಿರುವುದು ಇತರ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಕಾರಣ.