ಕೈಕೊಟ್ಟ ‘ಆಪರೇಷನ್ ಕಮಲ’: ಬೆಂಗಳೂರಿಗೆ ಯಡಿಯೂರಪ್ಪ ವಾಪಸ್ ಸಾಧ್ಯತೆ

ಬೆಂಗಳೂರು, ಜ. 16: ಕಳೆದ ಕೆಲ ದಿನಗಳಿಂದ ಹೊಸದಿಲ್ಲಿ, ಹರ್ಯಾಣದ ಗುರುಗ್ರಾಮದಲ್ಲಿ ಬೀಡುಬಿಟ್ಟಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ಯಡಿಯೂರಪ್ಪ, ಕ್ಷಿಪ್ರ ರಾಜಕೀಯ ಬೆಳವಣಿಗೆಳ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹಿಂದಿರುಗುವ ಸಾಧ್ಯತೆಗಳಿವೆ.
ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ಥಿರಕ್ಕೆ ಯತ್ನಿಸಿದ್ದ ಬಿಜೆಪಿಯ ‘ಆಪರೇಷನ್ ಕಮಲ’ ಕೈಕೊಟ್ಟ ಹಿನ್ನೆಲೆಯಲ್ಲಿ ಬಂದದಾರಿಗೆ ಸುಂಕವಿಲ್ಲವೆಂಬಂತೆ ಬಿಎಸ್‌ವೈ, ಗುರುಗ್ರಾಮದ ಹೊಟೇಲ್‌ನಿಂದ ದಿಲ್ಲಿಗೆ ತೆರಳಿ ವರಿಷ್ಟರನ್ನು ಭೇಟಿ ಮಾಡಿದ ಬಳಿಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆಂದು ಗೊತ್ತಾಗಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ನೆಪದಲ್ಲಿ ನಾಲ್ಕೈದು ದಿನಗಳಿಂದ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದ ಬಿಜೆಪಿ ಶಾಸಕರು, ಸಂಸದರು, ಪರಿಷತ್ ಸದಸ್ಯರು ಹಾಗೂ ಹಿರಿಯ ಮುಖಂಡರು, ಹರ್ಯಾಣದ ಗುರುಗ್ರಾಮದಲ್ಲಿನ ಐಷಾರಾಮಿ ಹೊಟೇಲ್‌ನಲ್ಲಿ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದರು. ಇದೀಗ ‘ಆಪರೇಷನ್ ಕಮಲ’ ವಿಫಲವಾದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬುಧವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಲಿದ್ದು, ಅನಾರೋಗ್ಯಕ್ಕೀಡಾಗಿರುವ ತುಮಕೂರಿನ ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ, ಶ್ರೀಗಳ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.







