ಚಂದ್ರನ ಮೇಲೆ ಚಿಗುರೊಡೆದ ಸಸಿ !

ಬೀಜಿಂಗ್, ಜ. 16: “ಚೀನಾದ ಚಂದ್ರಯಾನ ಕಾರ್ಯಕ್ರಮದ ಭಾಗವಾಗಿ ಚಂದ್ರನ ಮೇಲೆ ನಾವು ಮೊದಲ ಸಸಿಗಳನ್ನು ಬೆಳೆಸಿದ್ದೇವೆ” ಎಂದು ಆ ದೇಶದ ವಿಜ್ಞಾನಿಗಳು ಹೇಳಿದ್ದಾರೆ.
ಸಸಿಗಳನ್ನು ನೆಟ್ಟ 9 ದಿನಗಳ ಬಳಿಕ ಅವುಗಳು ಚಿಗುರೊಡೆಯುತ್ತಿರುವುದನ್ನು ತೋರಿಸುವ ಚಿತ್ರಗಳನ್ನು ಚಂದ್ರ ಶೋಧಕ ಕಾರ್ಯಕ್ರಮ ‘ಚಾಂಗ್’ಇ-4’ ಜನವರಿ 12ರಂದು ಕಳುಹಿಸಿಕೊಟ್ಟಿದೆ ಎಂದು ಕಾರ್ಯಕ್ರಮದ ಜೈವಿಕ ಯೋಜನೆಯ ನೇತೃತ್ವ ವಹಿಸಿರುವ ಚೊಂಗ್‌ಕಿಂಗ್ ವಿಶ್ವವಿದ್ಯಾನಿಲಯ ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಚಂದ್ರನಲ್ಲಿಗೆ ಹತ್ತಿ, ಕನೋಲ ಬೀಜ, ಆಲೂಗಡ್ಡೆ, ಅರಬಿಡೋಪ್ಸಿಸ್, ಯೀಸ್ಟ್ ಮತ್ತು ಫ್ರೂಟ್ ಫ್ಲೈ ಬೀಜಗಳನ್ನು ಒಯ್ಯಲಾಗಿದೆ. ಅವುಗಳನ್ನು ಗರಿಷ್ಠ ನಿರ್ವಾತ, ಉಷ್ಣತೆಯಲ್ಲಾಗುವ ಏರಿಳಿತಗಳು ಮತ್ತು ಪ್ರಬಲ ವಿಕಿರಣಕ್ಕೆ ಒಳಪಡಿಸಲಾಗಿದೆ.
ಚಂದ್ರನ ಕತ್ತಲ ಭಾಗದ ಮೇಲೆ ಶೋಧ ನೌಕೆಯೊಂದನ್ನು ಇಳಿಸಿದ ಮೊದಲ ದೇಶವಾಗಿ ಚೀನಾ ಇತಿಹಾಸ ನಿರ್ಮಿಸಿರುವುದನ್ನು ಸ್ಮರಿಸಬಹುದಾಗಿದೆ. ಆ ದೇಶದ ‘ಚಾಂಗ್’ ಇ-4’ ಯಾನವು ಜನವರಿ 3ರಂದು ಚಂದ್ರನ ಭೂಮಿಗೆ ಕಾಣದ ಭಾಗದ ಮೇಲೆ ಇಳಿದಿರುವುದನ್ನು ಸ್ಮರಿಸಬಹುದಾಗಿದೆ.