ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನ್ಯಾ.ದಿನೇಶ್ ಮಹೇಶ್ವರಿ, ನ್ಯಾ.ಸಂಜೀವ್ ಖನ್ನಾ ನೇಮಕ

ಹೊಸದಿಲ್ಲಿ,ಜ.16: ನ್ಯಾಯವಾದಿಗಳು ಮತ್ತು ನ್ಯಾಯಾಧೀಶರ ಒಂದು ವರ್ಗವು ಎತ್ತಿರುವ ಪ್ರಶ್ನೆಗಳ ನಡುವೆಯೇ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ದಿನೇಶ ಮಹೇಶ್ವರಿ ಮತ್ತು ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸಂಜೀವ ಖನ್ನಾ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ಪದೋನ್ನತಿಗೊಳಿಸಲಾಗಿದೆ. ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಮಾಡಿದ್ದ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬುಧವಾರ ಸಂಜೆ ಅನುಮತಿಯ ಮುದ್ರೆಯೊತ್ತಿದ್ದಾರೆ.
ಕೊಲಿಜಿಯಂ ಕಳೆದ ಡಿಸೆಂಬರ್‌ನಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಮತ್ತು ರಾಜಸ್ಥಾನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಪ್ರದೀಪ ನಂದ್ರಜೋಗಿ ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಳಿಸಲು ಶಿಫಾರಸು ಮಾಡಲು ನಿರ್ಧರಿಸಿತ್ತು. ಆದರೆ ಜನವರಿಯಲ್ಲಿ ತನ್ನ ಈ ನಿರ್ಧಾರವನ್ನು ಹಿಂದೆಗೆದುಕೊಂಡ ಕೊಲಿಜಿಯಂ ನ್ಯಾ.ಮಹೇಶ್ವರಿ ಮತ್ತು ನ್ಯಾ.ಖನ್ನಾ ಅವರ ಹೆಸರುಗಳನ್ನು ಶಿಫಾರಸು ಮಾಡಿತ್ತು.
ನ್ಯಾ.ಖನ್ನಾ ಮತ್ತು ನ್ಯಾ.ಮಹೇಶ್ವರಿ ಅವರ ಪದೋನ್ನತಿಯಿಂದ ನ್ಯಾ.ನಂದ್ರಜೋಗ್ ಸೇರಿದಂತೆ ಹಲವಾರು ಹಿರಿಯ ನ್ಯಾಯಾಧೀಶರನ್ನು ಅನ್ಯಾಯವಾಗಿ ಕಡೆಗಣಿಸಿದಂತಾಗುತ್ತದೆ ಎನ್ನುವುದು ಅವರ ಕೆಲವು ವೃತ್ತಿಸಂಬಂಧಿಗಳ ವಾದವಾಗಿದೆ.
ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶ ನ್ಯಾ.ಎಸ್.ಕೆ.ಕೌಲ್ ಅವರು ಈಗಾಗಲೇ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರಿಗೆ ಪತ್ರವೊಂದನ್ನು ಬರೆದು ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಕೈಲಾಷ್ ಗಂಭೀರ್ ಅವರೂ ರಾಷ್ಟ್ರಪತಿಗಳಿಗೆ ಬರೆಸಿರುವ ಪತ್ರದಲ್ಲಿ ಸರದಿ ತಪ್ಪಿಸಿ ನ್ಯಾಯಾಧೀಶರ ಪದೋನ್ನತಿಯನ್ನು ‘ಆತಂಕಕಾರಿ ಮತ್ತು ಅವಮಾನಕಾರಿ’ ಎಂದು ಬಣ್ಣಿಸಿದ್ದಾರೆ.
ನ್ಯಾ.ಖನ್ನಾ ಮತ್ತು ನ್ಯಾ.ಮಹೇಶ್ವರಿ ಅವರ ಪದೋನ್ನತಿ ನಿರ್ಧಾರದ ವಿರುದ್ಧ ವಕೀಲರ ಸಂಘವು ಬುಧವಾರ ಪ್ರತಿಭಟನೆಯನ್ನು ನಡೆಸಿದೆ. ನಮ್ಮ ಸಂವಿಧಾನವು ನಮ್ಮ ನ್ಯಾಯಾಂಗವನ್ನೂ ಜನರಿಗೆ ಉತ್ತರದಾಯಿಯನ್ನಾಗಿಸಿದೆ. ಆದರೆ ಕೊಲಿಜಿಯಮ್‌ನ ಇತ್ತೀಚಿನ ಪ್ರವೃತ್ತಿಯಿಂದಾಗಿ ವಕೀಲರು ಮತ್ತು ಜನರ ನಂಬಿಕೆಯು ನಶಿಸಿದೆ ಎಂದು ಸಂಘವು ಹೇಳಿದೆ.







