ಹೊಸ ದರ ನಿಗದಿಗೆ ಕೇಬಲ್ ಅಪರೇಟರ್‌ಗಳ ವಿರೋಧ: ಜ.24 ರಂದು ಕೇಬಲ್ ಟಿವಿ ಬಂದ್

ಬೆಂಗಳೂರು, ಜ.16: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ ಹೊಸ ದರ ನಿಗದಿಗೆ ಕೇಬಲ್ ಅಪರೇಟರ್‌ಗಳು ವಿರೋಧ ವ್ಯಕ್ತಪಡಿಸಿದ್ದು, ಜ.24ರಂದು ಕೇಬಲ್ ಟಿವಿ ಬಂದ್ ಮಾಡುವ ಮೂಲಕ ಪ್ರತಿಭಟಿಸಲು ನಿರ್ಧರಿಸಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ರಾಜ್ಯ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಶನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಮಾತನಾಡಿ, ಫೆಬ್ರವರಿ.1ರಿಂದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಚಾನೆಲ್‌ಗಳಿಗೆ ಹೊಸ ದರ ನಿಗದಿ ಪಡಿಸಲು ಮುಂದಾಗಿದೆ. ಇದರಿಂದ ಕೇವಲ ಆಪರೇಟರ್‌ಗಳು ಸಾಕಷ್ಟು ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಕೂಡಲೆ ಕೇಂದ್ರ ಸರಕಾರ ಹೊಸ ದರ ನಿಗದಿಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಜ.24ರಂದು ಬೆಳಗ್ಗೆ 10ಕ್ಕೆ ಕರ್ನಾಟಕವು ಸೇರಿದಂತೆ ಇಡೀ ದಕ್ಷಿಣ ಭಾರತದಲ್ಲಿ ಕೇಬಲ್ ಸ್ಥಗಿತಗೊಳಿಸಲಾಗುತ್ತದೆ. ಕೇಂದ್ರ ಸರಕಾರ ಯಾವುದೆ ಯೋಜನೆಯನ್ನು ಜಾರಿಗೆ ತರುವ ಮುನ್ನ ಸಂಬಂಧಿಸಿದ ಸಂಘ, ಸಂಸ್ಥೆಗಳೊಂದಿಗೆ ಚರ್ಚಿಸದೆ ತೀರ್ಮಾನಕ್ಕೆ ಬರುತ್ತದೆ. ಇದರಿಂದ ಸಣ್ಣ ಪುಟ್ಟ ವ್ಯಾಪಾರಸ್ಥರು ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಹೀಗಾಗಿ ಕೇಂದ್ರ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.





