ಚೆನ್ನೈನಿಂದ ದಿಲ್ಲಿವರೆಗೆ ಜ.21 ರಿಂದ ಸಿಲ್ವರ್ ಸೈಕಲ್‌ಥಾನ್
ಬೆಂಗಳೂರು, ಜ.16: ವೃದ್ಧಾಪ್ಯದ ಗಂಭೀರ ಅವಶ್ಯಕತೆಗಳ ಕುರಿತು ಜನರ ಗಮನ ಸೆಳೆಯುವ ಉದ್ದೇಶದಿಂದ ಹೆಲ್ಪೇಜ್ ಇಂಡಿಯಾ ಹಾಗೂ ಇತರೆ ಸಂಸ್ಥೆಗಳಿಂದ ಜ.21 ರಿಂದ ಸಿಲ್ವರ್ ಸೈಕಲ್‌ಥಾನ್ ಪ್ರವಾಸವನ್ನು ಚೆನ್ನೈನಿಂದ ದಿಲ್ಲಿವರೆಗೂ ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಲ್ಪೇಜ್ ಇಂಡಿಯಾದ ಮುಖ್ಯಸ್ಥೆ ರೇಖಾಮೂರ್ತಿ, ಈ ಯಾತ್ರೆಯು ವೃದ್ಧಾಶ್ರಮಗಳಲ್ಲಿ ವೃದ್ಧರಿಗೆ ಕಲ್ಪಿಸಲಾಗುತ್ತಿರುವ ದೀರ್ಘಾವಧಿ ಯೋಗಕ್ಷೇಮದ ಸೌಲಭ್ಯಗಳನ್ನು ನೋಡುವುದು. ಆ ಮೂಲಕ ಮುಂದಿನ ದಿನಗಳಲ್ಲಿ ಸರಕಾರದೊಂದಿಗೆ ಚರ್ಚಿಸಿ ಎಲ್ಲ ರೀತಿಯ ಅನುಕೂಲ ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
2010 ರಲ್ಲಿ ಭಾರತದ ವೃದ್ಧರ ಸಂಖ್ಯೆ 91.6 ಮಿಲಿಯನ್‌ಗಿಂತಲೂ ಅಧಿಕವಾಗಿದೆ. ಇದು ಮುಂದಿನ 2025 ರ ವೇಳೆಗೆ 158.7 ಮಿಲಿಯನ್ ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಒಟ್ಟಾರೆ ವೃದ್ಧರಲ್ಲಿನ ಮೂರನೇ ಎರಡು ಭಾಗದಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ಇದರಲ್ಲಿ ಶೇ.50 ಕ್ಕೂ ಅಧಿಕ ಜನರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳು ಶೋಚನೀಯವಾಗಿದೆ ಎಂದು ಹೇಳಿದರು.
ಈ ಯಾತ್ರೆಯು ಅಂದಾಜು ನಾಲ್ಕು ಸಾವಿರ ಕಿ.ಮೀ.ಗಳಷ್ಟು ಪ್ರಯಾಣಿಸಲಿದ್ದು, ಆಯ್ದ ಮಾರ್ಗಗಳಲ್ಲಿ ವೃದ್ಧಾಶ್ರಮಗಳಿಗೆ ಭೇಟಿ ನೀಡಲಾಗುತ್ತದೆ. ಈ ಮೂಲಕ ಒಂಟಿಯಾಗಿ ಜೀವನ ಸಾಗಿಸುತ್ತಿರುವ ವೃದ್ಧರನ್ನು, ಅನಾರೋಗ್ಯ ಪೀಡಿತರನ್ನು, ಕ್ಷೋಭೆಗೀಡಾದ ವೃದ್ಧರನ್ನು ಸಂಪರ್ಕಿಸಲಾಗುತ್ತದೆ. ಯಾತ್ರೆಯು ಜ.21 ರಂದು ಚೆನ್ನೈನಿಂದ ಆರಂಭವಾಗಿ ಕರ್ನಾಟಕ, ಸಂಕೇಶ್ವರ್, ಸತಾರ, ಕೊಲ್ಹಾಪುರ, ಪುಣೆ, ಅಹಮದಾಬಾದ್, ಉದಯ್‌ಪುರ್, ಜೈಪುರ್, ಗುರ್‌ಗ್ರಾಮ್ ಮೂಲಕ ದಿಲ್ಲಿ ತಲುಪಲಿದೆ ಎಂದು ಮಾಹಿತಿ ನೀಡಿದರು.







