ಜ.18: ಬೆಂಗಳೂರಿನಲ್ಲಿ ಬೀಡಿ ಕಾರ್ಮಿಕರ ಫೆಡರೇಷನ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
ಮಂಗಳೂರು, ಜ.16: ಅಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಷನ್-ಸಿಐಟಿಯುನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಜ.18ರಂದು ಬೆಂಗಳೂರಿನಲ್ಲಿ ರುವ ಜೀವ ವಿಮಾ ನೌಕರರ ಸಂಘಟನೆಯ ಯೂನಿಯನ್ ಕಚೇರಿಯಲ್ಲಿ ನಡೆಯಲಿದೆ.
ಅಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಷನ್ ಉಪಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಹಾಗೂ ಕಾರ್ಯದರ್ಶಿ ಮುಜೀಬ್ ಹೇಳಿಕೆಯಲ್ಲಿ ತಿಳಿಸಿದ್ದು, ಈ ಸಭೆಗೆ ಬೀಡಿ ಉತ್ಪಾದನೆಯಲ್ಲಿ ತೊಡಗಿರುವ 14-15 ರಾಜ್ಯಗಳ ಬೀಡಿ ಕಾರ್ಮಿಕರ ಸಂಘಟನೆ ಮುಂದಾಳುಗಳು ಭಾಗವಹಿಸಲಿದ್ದಾರೆ ಎಂದರು.
ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ‘ಧೂಮಪಾನ ನಿಷೇಧ ಕಾಯ್ದೆ ಹಾಗೂ ತಂಬಾಕುಮುಕ್ತ ಭಾರತ’ದಿಂದಾಗಿ ಸಮಾಜದಲ್ಲಿ ಧೂಮಪಾನ ಗಣನೀಯ ಇಳಿಮುಖ ಕಾಣುತ್ತಿದ್ದು, ತಂಬಾಕು ಉತ್ಪನ್ನಗಳ ಮಾರುಕಟ್ಟೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೀಡಿ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ಅಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಷನ್ ತಿಳಿಸಿದೆ.
ಪಾರ್ಲಿಮೆಂಟ್‌ನ ಅಧಿವೇಶನದ ಸಂದರ್ಭದಲ್ಲಿ ಬೀಡಿ ಕಾರ್ಮಿಕ ಸಂಘಟನೆಗಳ ಜಂಟಿ ನಿಯೋಗವು ಕೇಂದ್ರ ಕಾರ್ಮಿಕ ಸಚಿವರು ಹಾಗೂ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನು ಕಂಡು ಮೇಲ್ಕಂಡ ಹಕ್ಕೊತ್ತಾಯಗಳ ಬಗ್ಗೆ ಚರ್ಚಿಸಲು ಈ ಸಭೆ ಮಹತ್ವದ ಚರ್ಚೆಗಳನ್ನು ನಡೆಸಲಿದೆ ಎಂದು ಅಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಷನ್ ತಿಳಿಸಿದೆ.
ಅಖಿಲ ಭಾರತ ಬೀಡಿ ಕಾರ್ಮಿಕರ ಫೆಡರೇಷನ್ ಅಧ್ಯಕ್ಷ ಸಹದೇವ್ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೇಬಶಿಶ್ ರಾಯ್, ಪಶ್ಚಿಮ ಬಂಗಾಳ, ಬಿಹಾರ, ಛತ್ತೀಸ್‌ಗಡ, ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳ ಬೀಡಿ ಕಾರ್ಮಿಕ ಚಳವಳಿಯ ಮುಂಚೂಣಿಯ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.







