ಪ್ರವಾದಿ ನಿಂದನೆ: ಜ.18ರಂದು ಉಳ್ಳಾಲದಲ್ಲಿ ಖಂಡನಾ ಸಭೆ
ಉಳ್ಳಾಲ, ಜ. 16: ಪ್ರವಾದಿ(ಸ) ಅವರನ್ನು ನಿಂದಿಸಿರುವ ನಿರೂಪಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜ. 18ರಂದು ಸಂಜೆ 3.30ಕ್ಕೆ ಉಳ್ಳಾಲದಲ್ಲಿ ಬೃಹತ್ ಖಂಡನಾ ಸಭೆ ನಡೆಯಲಿದೆ ಎಂದು ಉಳ್ಳಾಲ ಮುಸ್ಲಿಂ ಜಮಾತ್ ಸಂಚಾಲಕ ಫಾರೂಕ್ ಉಳ್ಳಾಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾನುಗ್ರಹಿಯಾಗಿರುವ ಪ್ರವಾದಿ (ಸ) ಅವರು ತಮ್ಮ ಜೀವಿತಾವಧಿಯಲ್ಲಿ ಒಂದೇ ಒಂದು ತಪ್ಪನ್ನೂ ಮಾಡದೆ, ಮಾದರಿ ಜೀವನ ನಡೆಸಿರುವುದನ್ನು ಇತಿಹಾಸವೇ ಹೇಳುತ್ತದೆ. ಅವರ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಆದರೆ ಧಾರ್ಮಿಕ ವಿಚಾರವೇ ಗೊತ್ತಿಲ್ಲದ ವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ಆಡಿರುವ ಅಶ್ಲೀಲ ಮಾತುಗಳು ನೋವುಂಟು ಮಾಡಿದೆ ಎಂದರು.
ಪ್ರವಾದಿ(ಸ) ವಿರುದ್ಧ ಬರುವ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಯಲಿದೆ. ಶುಕ್ರವಾರ ಸಂಜೆ 3.30ಕ್ಕೆ ಹಝ್ರತ್ ಮೈದಾನದಲ್ಲಿ ಬೃಹತ್ ಖಂಡನಾ ಸಭೆ ನಡೆಯಲಿದೆ ಎಂದು ಫಾರೂಕ್ ಉಳ್ಳಾಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಳ್ಳಾಲ ಮುಸ್ಲಿಂ ಜಮಾತ್‍ನ ಹಿರಿಯ ಸಂಚಾಲಕ ಯೂಸುಫ್ ಉಳ್ಳಾಲ್, ನಗರಸಭಾ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ಸಾಮಾಜಿಕ ಮುಂದಾಳು ನಾಝಿಂ ಉಳ್ಳಾಲ್, ನಗರಸಭಾ ಸದಸ್ಯ ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.







