ಡಿಜಿಪಿಗಳ ಆಯ್ಕೆ, ನಿಯೋಜನೆ: ಐದು ರಾಜ್ಯಗಳ ತಿದ್ದುಪಡಿ ಮನವಿ ತಿರಸ್ಕರಿಸಿದ ಸುಪ್ರೀಂ
ಹೊಸದಿಲ್ಲಿ, ಜ. 16: ಡಿಜಿಪಿಗಳ ಆಯ್ಕೆ ಹಾಗೂ ನಿಯೋಜನೆ ಕುರಿತಂತೆ ಕಳೆದ ವರ್ಷ ನೀಡಲಾದ ಆದೇಶದಲ್ಲಿ ತಿದ್ದುಪಡಿ ಮಾಡುವಂತೆ ಕೋರಿ ಐದು ರಾಜ್ಯಗಳು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ಡಿಜಿಪಿಗಳ ಆಯ್ಕೆ ಹಾಗೂ ನಿಯೋಜನೆಗೆ ಸಂಬಂಧಿಸಿ ಸ್ಥಳೀಯ ಕಾನೂನನನ್ನು ಅನುಷ್ಠಾನಗೊಳಿಸುವಂತೆ ಕೋರಿ ಪಂಜಾಬ್, ಕೇರಳ, ಪಶ್ಚಿಮಬಂಗಾಳ, ಹರ್ಯಾಣ ಹಾಗೂ ಬಿಹಾರ್ ಸಹಿತ ಹಲವು ರಾಜ್ಯ ಸರಕಾರಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಈ ಹಿಂದೆ ಡಿಜಿಪಿಗಳ ಆಯ್ಕೆ ಹಾಗೂ ನಿಯೋಜನೆ ಕುರಿತು ನ್ಯಾಯಾಲಯ ನೀಡಿದ ನಿರ್ದೇಶನ ಸಾರ್ವಜನಿಕ ಹಿತಾಸಕ್ತಿ ಹಾಗೂ ರಾಜಕೀಯ ಮಧ್ಯಪ್ರವೇಶದಿಂದ ಪೊಲೀಸ್ ಅಧಿಕಾರಿಗಳನ್ನು ರಕ್ಷಿಸುವ ಉದ್ದೇಶ ಹೊಂದಿತ್ತು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ಹೇಳಿದೆ.
ಪಂಜಾಬ್ ಹಾಗೂ ಹರ್ಯಾಣದ ಡಿಜಿಪಿಗಳ ಅಧಿಕಾರವಧಿಯನ್ನು ಜನವರಿ 31ರ ವರೆಗೆ ವಿಸ್ತರಿಸಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಪೊಲೀಸ್ ವರಿಷ್ಠರ ಆಯ್ಕೆ ಹಾಗೂ ನಿಯೋಜನೆಗೆ ಸಂಬಂಧಿಸಿ ಸ್ಥಳೀಯ ಕಾನೂನನ್ನು ಅನುಷ್ಠಾನಗೊಳಿಸುವಂತೆ ಕೋರಿ ಸಲ್ಲಿಸಲಾದ ರಾಜ್ಯಗಳ ಮನವಿಯ ವಿಚಾರಣೆಗೆ ಒಪ್ಪಿಕೊಂಡಿತ್ತು.