ನಾಗೇಶ್ವರ ರಾವ್ ನೇಮಕ ಪ್ರಕರಣ: ಸುಪ್ರೀಂನಿಂದ ಮುಂದಿನ ವಾರ ಕಾಮನ್ ಕಾಸ್ ಮನವಿಯ ವಿಚಾರಣೆ
ಹೊಸದಿಲ್ಲಿ, ಜ. 16: ಸಿಬಿಐಯ ಮಧ್ಯಂತರ ವರಿಷ್ಠರನ್ನಾಗಿ ಎಂ. ನಾಗೇಶ್ವರ ರಾವ್ ಅವರನ್ನು ನಿಯೋಜಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ಮುಂದಿನ ವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿದೆ. ರಾವ್ ಅವರನ್ನು ಸಿಬಿಐ ವರಿಷ್ಠರ ಹುದ್ದೆಗೆ ನಿಯೋಜಿಸಿ ಸಂಪುಟದ ನೇಮಕಾತಿ ಸಮಿತಿ ಜನವರಿ 10ರಂದು ನೀಡಿದ ಆದೇಶ ರದ್ದುಗೊಳಿಸು ವಂತೆ ಕೋರಿ ಸರಕಾರೇತರ ಸಂಸ್ಥೆ ಕಾಮನ್ ಕಾಸ್ ಮನವಿ ಸಲ್ಲಿಸಿತ್ತು.
ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ವರ್ಮಾ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಡ್ಡಾಯ ರಜೆಯ ಮೇಲೆ ಕಳುಹಿಸಿದ ಬಳಿಕ ರಾವ್ ಅವರನ್ನು ಮೊದಲ ಬಾರಿಗೆ ಸಿಬಿಐಯ ಮಧ್ಯಂತರ ವರಿಷ್ಠರನ್ನಾಗಿ ನೇಮಕ ಮಾಡಲಾಗಿತ್ತು.
ಸಿಬಿಐ ನಿರ್ದೇಶಕರನ್ನು ನಿಯೋಜಿಸುವಾಗ ದಿಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಸ್‌ಮೆಂಟ್ ಕಾಯ್ದೆ-1946ರ ಕಲಂ 4ಎ, ಲೋಕಪಾಲ್ ಹಾಗೂ ಲೋಕಾಯುಕ್ತ ತಿದ್ದುಪಡಿ ಕಾಯ್ದೆ -2013 ವಿಧಿಸಿದ ಕಾನೂನು ಕ್ರಮವನ್ನು ಅನುಸರಿಸಬೇಕೆಂದು ಕಾಮನ್ ಕಾಸ್ ಮನವಿಯಲ್ಲಿ ಆಗ್ರಹಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಸಿಬಿಐ ವರಿಷ್ಠ ಅಲೋಕ್ ವರ್ಮಾ ಅವರನ್ನು ಪದಚ್ಯುತಿಗೊಳಿಸಿದ ಬಳಿಕ ಸಿಬಿಐಗೆ ರಾವ್ ಅವರನ್ನು ಮಧ್ಯಂತರ ವರಿಷ್ಠರನ್ನಾಗಿ ನಿಯೋಜಿಸಲಾಗಿತ್ತು. ರಾವ್ ಅವರನ್ನು ಸಿಬಿಐಯ ಮಧ್ಯಂತರ ವರಿಷ್ಠರನ್ನಾಗಿ ನೇಮಕ ಮಾಡಿರುವುದು ಕಾನೂನು ಬಾಹಿರ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು ಹಾಗೂ ಸಿಬಿಐಯ ನೂತನ ನಿರ್ದೇಶಕರನ್ನು ಆಯ್ಕೆ ಮಾಡಲು ಕೂಡಲೇ ಆಯ್ಕೆ ಸಮಿತಿ ಸಭೆಯನ್ನು ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದರು.