ಕುವೈತ್: ಕೆಐಎಫ್‌ಎಫ್‌ನಿಂದ ವಿದ್ಯಾರ್ಥಿಗಳಿಗಾಗಿ ಟೀನ್ ಬೀಟ್ 2019 ಶಿಬಿರ

ಕುವೈತ್ , ಜ.16: ವಿದ್ಯಾರ್ಥಿಗಳಿಗಾಗಿ ಕುವೈತ್ ಇಂಡಿಯಾ ಫ್ರೆಟರ್ನಿಟಿ ಫೋರಮ್ (ಕೆಐಎಫ್‌ಎಫ್) ಟೀನ್ ಬೀಟ್ಸ್ 2019 ಹೆಸರಲ್ಲಿ ಒಂದು ದಿನದ ಶಿಬಿರವನ್ನು ಆಯೋಜಿಸಿತ್ತು.
ಕೆ.ಎಂ.ಎ ಸಭಾಂಗಣದಲ್ಲಿ ನಡೆದ ಈ ಶಿಬಿರ ವಿದ್ಯಾರ್ಥಿಗಳಿಗೆ ಅಭೂತಪೂರ್ವ ಅನುಭವವನ್ನು ನೀಡಿತು. ಪ್ರಖ್ಯಾತ ಸಾಮಾಜಿಕ ಕಾರ್ಯಕರ್ತ ಮತ್ತು ಭಾರತೀಯ ವೈದ್ಯರ ವೇದಿಕೆಯ ಸದಸ್ಯ ಡಾ. ಅಮೀರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಿಬಿರವು ವಿದ್ಯಾರ್ಥಿಗಳಲ್ಲಿ ನೈತಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿತ್ತು. ಅಂತರ್ ರಾಷ್ಟ್ರೀಯ ತರಬೇತುದಾರ ಮತ್ತು ಸಲಹೆಗಾರ ಡಾ. ಅನಸ್ ಅವರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಲು ನೆರವಾಗುವ ಹಲವು ವಿಷಯಗಳಲ್ಲಿ ತರಗತಿಗಳನ್ನು ತೆಗೆದುಕೊಂಡರೆ ಭಾರತೀಯ ನಾಗರಿಕ ಸೇವೆಯ ತರಬೇತುದಾರ ಶಮೀಮ್ ಹನೀಫ್ ವೃತ್ತಿ ಜೀವನ ಮಾರ್ಗದರ್ಶನವನ್ನು ನೀಡಿದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆಐಎಫ್‌ಎಫ್ ಅಧ್ಯಕ್ಷ ಶಿಹಾಬುದ್ದೀನ್ ಟಿ.ಎಸ್ ವಹಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಮತ್ತು ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಇಂಡಿಯನ್ ಸೋಶಿಯಲ್ ಫೋರಮ್ ಅಧ್ಯಕ್ಷ ಝಕರಿಯ, ಕೆಐಎಫ್‌ಎಫ್ ಕಾರ್ಯದರ್ಶಿಗಳಾದ ಜಮ್ಶಿ ಮತ್ತು ಸೈಫುದ್ದೀನ್ ಉಪಸ್ಥಿತರಿದ್ದರು. ಮಾಸ್ಟರ್ ಫರ್ಹಾನ್ ಕುರಾನ್ ಪಠಣ ಮಾಡುವ ಮೂಲಕ ಶಿಬಿರವನ್ನು ಆರಂಭಿಸಲಾಯಿತು. ನಾದಿಯಾ ಶಿಹಾಬ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕ ಶಫೀರ್ ತ್ರಿವೆಂಡ್ರಮ್ ವಂದಿಸಿದರು.









