ತಾಯಿಯ ಮೃತದೇಹವನ್ನು ಸೈಕಲ್ ನಲ್ಲಿ ದಫನ ಭೂಮಿಗೆ ಸಾಗಿಸಿದ ಬಾಲಕ
ಕೆಳ ಜಾತಿಗೆ ಸೇರಿದವರೆಂಬ ಕಾರಣಕ್ಕೆ ನೆರವಾಗದ ನೆರೆಹೊರೆಯವರು
ಭುಬನೇಶ್ವರ್, ಜ.17: ಕೆಳ ಜಾತಿಗೆ ಸೇರಿದವರೆಂಬ ಒಂದೇ ಕಾರಣಕ್ಕೆ ನೆರೆಹೊರೆಯವರು ಸಹಾಯಹಸ್ತ ಚಾಚಲು ನಿರಾಕರಿಸಿದ ನಂತರ ಒಡಿಶಾದ ಝರ್ಸುಗುಡ ಜಿಲ್ಲೆಯ ಲಖನಪುರ್ ಬ್ಲಾಕಿನ ಕರ್ಪಭಲ್ ಎಂಬ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ತನ್ನ ತಾಯಿಯ ಮೃತದೇಹವನ್ನು ಮೂರ್ನಾಲ್ಕು ಕಿಲೋಮೀಟರ್ ದೂರದ ದಫನ ಭೂಮಿಗೆ ತನ್ನ ಬೈಸಿಕಲ್ ನಲ್ಲಿ ಕಷ್ಟದಿಂದ ಸಾಗಿಸಿದ ಮನ ಕರಗಿಸುವ ಘಟನೆ ನಡೆದಿದೆ. ತನ್ನ ತಾಯಿ ಹಿಂಬದಿ ಸವಾರೆಯಾಗಿ ಸೈಕಲಿನಲ್ಲಿ ಕುಳಿತುಕೊಳ್ಳುತ್ತಿದ್ದ ಸ್ಥಳದಲ್ಲಿಯೇ ಆಕೆಯ ಮೃತದೇಹವನ್ನು ಇರಿಸಿ ಸರೋಜ್ ಒಯ್ದಿದ್ದ.
ಜಾನಕಿ ಸಿನ್ಹನಿಯಾ ಎಂಬ 45 ವರ್ಷದ ಮಹಿಳೆ ನೀರು ತರಲು ಹೋದ ಸಂದರ್ಭ ಕುಸಿದು ಬಿದ್ದು ಸಾವನ್ನಪ್ಪಿದ್ದಳು. ನಂತರ ಆಕೆಯ 17 ವರ್ಷದ ಪುತ್ರ ಸರೋಜ್ ತಾಯಿಯ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಲು ನೆರೆಹೊರೆಯವರನ್ನು ವಿನಂತಿಸಿದರೂ ಅವರು ಕೆಳ ಜಾತಿಯವರೆಂಬ ಕಾರಣಕ್ಕೆ ಎಲ್ಲರೂ ಸಹಾಯ ನಿರಾಕರಿಸಿದ್ದರು.
ಉಪಾಯವಿಲ್ಲದೆ ಸರೋಜ್ ತಾಯಿಯ ಮೃತದೇಹವನ್ನು ಸೈಕಲ್ ಹಿಂಭಾಗದಲ್ಲಿ ಕಷ್ಟದಿಂದ ಇರಿಸಿ ಗ್ರಾಮದಿಂದ ಮೂರ್ನಾಲ್ಕು ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ದಫನ ಮಾಡಿದ್ದಾನೆ.
ಸರೋಜ್ ತಂದೆ ತೀರಿ ಹೋಗಿದ್ದು, ಆತ ತನ್ನ ಸೋದರಿ ಮತ್ತು ತಾಯಿಯೊಂದಿಗೆ ಅಜ್ಜಿ ಮನೆಯಲ್ಲಿ ವಾಸವಾಗಿದ್ದ.