ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ಕಳಂಕ: ವಿನಯ ಕುಮಾರ್ ಸೊರಕೆ
ಉಡುಪಿಯಲ್ಲಿ ಮೋದಿ- ಅಮಿತ್ ಶಾ ವಿರುದ್ಧ ಧರಣಿ

ಉಡುಪಿ, ಜ.17: ಗೋವಾ, ಅರುಣಾಚಲ ಪ್ರದೇಶ, ಮಣಿಪುರ ರಾಜ್ಯ ಗಳಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನ ಗೆದ್ದಿದ್ದರೂ ಕೂಡ ಬಿಜೆಪಿ, ಕುದುರೆ ವ್ಯಾಪಾರ ಮಾಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾರರು ನೀಡಿದ ತೀರ್ಮಾನಕ್ಕೆ ತದ್ವಿರುದ್ಧವಾಗಿ ಅಧಿಕಾರಕ್ಕೇರಿತು. ಇದೀಗ ರಾಜ್ಯದಲ್ಲೂ ಸರಕಾರವನ್ನು ಶಿಥಿಲ ಗೊಳಿಸಲು ಕುದುರೆ ವ್ಯಾಪಾರದಲ್ಲಿ ತೊಡಗಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಳಂಕವಾಗುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಬಿಜೆಪಿ ಪಕ್ಷದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಗುರುವಾರ ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಜನರಿಂದ ಆಯ್ಕೆಯಾದ ಶಾಸಕರನ್ನು ಕೋಟ್ಯಂತ ರೂ. ಹಣದ ಆಮಿಷವೊಡ್ಡಿ ಖರೀದಿಸುವ ವಸ್ತು ಎಂಬಂತೆ ಪಕ್ಷಾಂತರ ಮಾಡುವ ಕೆಲಸಕ್ಕೆ ಬಿಜೆಪಿ ಮುಂದಾಗಿರುವುದು ನಾಚಿಕೆಗೇಡು. ಸಂವಿಧಾನದ ಮೇಲೆ ವಿಶ್ವಾಸ ಇಲ್ಲದ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯ ಶಿಥಿಲಗೊಳಿಸುವ ಕೆಲಸ ಮಾಡುತ್ತಿದೆ. ಇದರ ಹಿಂದೆ ಮೋದಿ ಹಾಗೂ ಅಮಿತ್ ಶಾ ಕೆಲಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಮಾಜಿ ಶಾಸಕ ಗೋಪಾಲ ಭಂಡಾರಿ ಮಾತನಾಡಿ, ಶಾಸಕರುಗಳಿಗೆ ಹಣ ಆಮಿಷವೊಡ್ಡಿ ಆಪರೇಷನ್ ಕಮಲ ಮಾಡುವ ಮೂಲಕ ಬಿಜೆಪಿ ಪಕ್ಷ ಪ್ರಜಾ ಪ್ರಭುತ್ವವನ್ನು ಕಗ್ಗೊಲೆ ಮಾಡಲು ಹೊರಟಿದೆ. ಇವರಿಂದ ಇಡೀ ಪ್ರಜಾಪ್ರಭುತ್ವ ತಲೆತಗ್ಗಿಸುವಂತಾಗಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಮುಖಂಡರಾದ ಅಮೃತ್ ಶೆಣೈ, ವರೋನಿಕಾ ಕರ್ನೆಲಿಯೋ, ಪ್ರಖ್ಯಾತ್ ಶೆಟ್ಟಿ, ಶಬ್ಬೀರ್ ಉಡುಪಿ, ಲೂವಿಸ್ ಲೋಬೊ, ಚಂದ್ರಿಕಾ ಶೆಟ್ಟಿ, ವಿಲ್ಸನ್ ರೋಡಿಗ್ರಸ್, ಭಾಸ್ಕರ್ ರಾವ್ ಕಿದಿಯೂರು, ನರಸಿಂಹಮೂರ್ತಿ, ಹರೀಶ್ ಕಿಣಿ, ರೋಶ್ನಿ ಒಲಿವೇರಾ ಮೊದಲಾದವರು ಉಪಸ್ಥಿತರಿದ್ದರು.
ನಾಪತ್ತೆಯಾಗಿರುವ ಬೋಟು ಸಹಿತ ಏಳು ಮಂದಿ ಮೀನುಗಾರರನ್ನು ಹುಡುಕುವ ಜವಾಬ್ದಾರಿ ಹೊರಬೇಕಾಗಿದ್ದ ಜಿಲ್ಲೆಯ ಶಾಸಕರುಗಳು ರೆಸಾರ್ಟ್ ಗಳಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಆದರೆ ಇಲ್ಲಿ ಮೀನುಗಾರರಿಗೆ ಸಾಂತ್ವನ ಹೇಳಲು ಶಾಸಕರುಗಳೇ ಇಲ್ಲವಾಗಿದೆ ಎಂದು ಮಾಜಿ ಸಚಿವ ವಿನಯ ಕುವಾರ್ ಸೊರಕೆ ಕಟುವಾಗಿ ಟೀಕಿಸಿದರು.










