ಫೆಬ್ರವರಿಯೊಳಗೆ ಲೋಕಪಾಲ ಹುದ್ದೆಗೆ ಹೆಸರುಗಳ ಶಿಫಾರಸು: ಶೋಧ ಸಮಿತಿಗೆ ಸುಪ್ರೀಂ ಗಡುವು

ಹೊಸದಿಲ್ಲಿ,ಜ.17: ಫೆಬ್ರವರಿ ಅಂತ್ಯದೊಳಗೆ ಲೋಕಪಾಲ ಹುದ್ದೆಗೆ ಹೆಸರುಗಳನ್ನು ಶಿಫಾರಸು ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ಶೋಧ ಸಮಿತಿಗೆ ಸೂಚಿಸಿದೆ. ಶೋಧ ಸಮಿತಿಯು ತನ್ನ ಕಾರ್ಯವನ್ನು ಪೂರ್ಣಗೊಳಿಸಲು ಅದಕ್ಕೆ ಅಗತ್ಯ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ಒದಗಿಸುವಂತೆ ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಪೀಠವು ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಿದೆ.
ಲೋಕಪಾಲ ನೇಮಕಕ್ಕಾಗಿ ಸೆಪ್ಟೆಂಬರ್‌ನಿಂದೀಚಿಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ಜ.17ರೊಳಗೆ ಅಫಿದಾವತ್ತನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಜ.4ರಂದು ಕೇಂದ್ರಕ್ಕೆ ಸೂಚಿಸಿತ್ತು.
ಎನ್‌ಜಿಒ ಕಾಮನ್‌ಕಾಸ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ. ಕೇಂದ್ರವು ತನ್ನ ವೆಬ್‌ಸೈಟ್‌ನಲ್ಲಿ ಶೋಧ ಸಮಿತಿಯ ಹೆಸರುಗಳನ್ನೂ ಪ್ರಕಟಿಸಿಲ್ಲ ಎಂದು ಅದು ದೂರಿಕೊಂಡಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ಸರಕಾರವು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶೆ ರಂಜನಾ ಪ್ರಕಾಶ ದೇಸಾಯಿ ಅವರ ನೇತೃತ್ವದಲ್ಲಿ ಶೋಧ ಸಮಿತಿಯನ್ನು ರಚಿಸಿತ್ತು.
ಶೋಧ ಸಮಿತಿಗೆ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ಕೊರತೆಯಂತೆ ಕೆಲವು ಸಮಸ್ಯೆಗಳಿರುವುದರಿಂದ ಅದು ಈವರೆಗೆ ಒವ್ಮೆುಯೂ ಸಭೆ ಸೇರಿಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿದಾವತ್ತ್ನಲ್ಲಿ ತಿಳಿಸಲಾಗಿದೆ.
ಪ್ರಕರಣದ ಮುಂದಿನ ವಿಚಾರಣೆ ಮಾ.7ರಂದು ನಡೆಯಲಿದೆ.







