ವಿವಾದಗಳ ನಡುವೆಯೇ ಸುಪ್ರೀಂ ನ್ಯಾಯಾಧೀಶರಾಗಿ ನಾಳೆ ಮಹೇಶ್ವರಿ ಮತ್ತು ಖನ್ನಾ ಪ್ರಮಾಣ ವಚನ

ಹೊಸದಿಲ್ಲಿ,ಜ.17: ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಪದೋನ್ನತಿಗೊಂಡಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ದಿನೇಶ ಮಹೇಶ್ವರಿ ಮತ್ತು ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಸಂಜೀವ ಖನ್ನಾ ಅವರು ಶುಕ್ರವಾರ ಭಾರತದ ಮುಖ್ಯ ನ್ಯಾಯಾಧೀಶರಾದ ನ್ಯಾ.ರಂಜನ ಗೊಗೊಯಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ 31 ನ್ಯಾಯಾಧೀಶರ ಹುದ್ದೆಗಳ ಪೈಕಿ ಐದು ಈಗ ಖಾಲಿಯಿವೆ.
ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶ ಸಂಜಯ ಕೌಲ್ ಅವರು ಈ ನೇಮಕಗಳನ್ನು ಆಕ್ಷೇಪಿಸಿ ಈಗಾಗಲೇ ನ್ಯಾ.ಗೊಗೊಯಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ದಿಲ್ಲಿ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಕೈಲಾಷ್ ಗಂಭೀರ್ ಸೇರಿದಂತೆ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ಮೂವರು ಮಾಜಿ ನ್ಯಾಯಾಧೀಶರೂ ಈ ನೇಮಕಗಳನ್ನು ಪ್ರಶ್ನಿಸಿದ್ದಾರೆ.
ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕಕ್ಕೆ ಹೆಸರುಗಳನ್ನು ಶಿಫಾರಸು ಮಾಡುವ ಕೊಲಿಜಿಯಂ ಕಾರ್ಯ ನಿರ್ವಹಣೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಗುರುವಾರ ಇಲ್ಲಿ ಹೇಳಿದ ಮಾಜಿ ಸುಪ್ರೀಂ ನ್ಯಾಯಾಧೀಶ ಜೆ.ಚೆಲಮೇಶ್ವರ ಅವರು,ಇದೇ ಕಾರಣದಿಂದಾಗಿಯೇ 2016ರಲ್ಲಿ ಕೊಲಿಜಿಯಂ ಸಭೆಗಳಲ್ಲಿ ಪಾಲ್ಗೊಳ್ಳಲು ತಾನು ನಿರಾಕರಿಸಿದ್ದೆ ಎಂದು ಸುದ್ದಿಗಾರರಿಗೆ ತಿಳಿಸಿದರು.





