ಮೂತ್ರ ವಿಸರ್ಜನೆಯ ವೇಳೆ ನೋವೇ? ಇಲ್ಲಿವೆ ಕಾರಣಗಳು
ಮೂತ್ರ ವಿಸರ್ಜನೆಯ ವೇಳೆ ನೋವು ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಅನುಭವವಾಗಿರುತ್ತದೆ. ಈ ನೋವು ಮೂತ್ರಕೋಶ,ಮೂತ್ರ ವಿಸರ್ಜನಾ ನಾಳ ಅಥವಾ ಮೂಲಾಧಾರದಲ್ಲಿ ಆರಂಭಗೊಳ್ಳಬಹುದು. ಮೂತ್ರನಾಳ ವಿಸರ್ಜನಾ ನಾಳವು ಮೂತ್ರವನ್ನು ಶರೀರದಿಂದ ಹೊರಕ್ಕೆ ಸಾಗಿಸುತ್ತದೆ. ಪುರುಷರಲ್ಲಿ ವೃಷಣಕೋಶ ಮತ್ತು ಗುದದ್ವಾರದ ನಡುವಿನ ಭಾಗವು ಮೂಲಾಧಾರವಾಗಿದ್ದರೆ, ಮಹಿಳೆಯರಲ್ಲಿ ಇದು ಗುದದ್ವಾರ ಮತ್ತು ಯೋನಿದ್ವಾರದ ನಡುವೆ ಇರುತ್ತದೆ.
ನೋವಿನಿಂದ ಕೂಡಿದ ಮೂತ್ರ ವಿಸರ್ಜನೆ ಅಥವಾ ಉರಿಮೂತ್ರ ಅತ್ಯಂತ ಸಾಮಾನ್ಯವಾಗಿದೆ. ನೋವು,ಉರಿ ಅಥವಾ ಕುಟುಕಿದಂತಹ ಅನುಭವ ಇವೆಲ್ಲ ಹಲವಾರು ವೈದ್ಯಕೀಯ ಸ್ಥಿತಿಗಳನ್ನು ಸೂಚಿಸುತ್ತವೆ.
ನೋವಿನಿಂದ ಕೂಡಿದ ಮೂತ್ರ ವಿಸರ್ಜನೆಯು ಮೂತ್ರನಾಳ ಸೋಂಕಿನ (ಯುಟಿಐ)ಸಾಮಾನ್ಯ ಲಕ್ಷಣವಾಗಿದೆ ಮತ್ತು ಬ್ಯಾಕ್ಟೀರಿಯಾ ಸೋಂಕು ಯುಟಿಐಗೆ ಕಾರಣವಾಗುತ್ತದೆ. ಅದು ಮೂತ್ರನಾಳದ ಉರಿಯೂತದಿಂದಲೂ ಉಂಟಾಗಬಹುದು.
ಮೂತ್ರ ವಿಸರ್ಜನಾ ನಾಳ,ಮೂತ್ರಕೋಶ,ಮೂತ್ರಪಿಂಡಗಳು ಮತ್ತು ಯುರೇಟರ್‌ಗಳು ಯುರಿನರಿ ಟ್ರಾಕ್ಟ್‌ನ ಭಾಗಗಳಾಗಿವೆ. ಯುರೇಟರ್‌ಗಳು ಮೂತ್ರಪಿಂಡಗಳಿಂದ ಮೂತ್ರಕೋಶಕ್ಕೆ ಮೂತ್ರವನ್ನು ಸಾಗಿಸುವ ಕಿರುನಾಳಗಳಾಗಿವೆ. ಈ ಪೈಕಿ ಒಂದು ಅಂಗವು ಉರಿಯೂತಕ್ಕೊಳಗಾದರೂ ಉರಿಮೂತ್ರಕ್ಕೆ ಕಾರಣವಾಗುತ್ತದೆ.
ಪುರುಷರಿಗಿಂತ ಮಹಿಳೆಯರು ಮೂತ್ರನಾಳದ ಸೋಂಕಿಗೊಳಗಾಗುವುದು ಹೆಚ್ಚು. ಮಹಿಳೆಯರಲ್ಲಿ ಮೂತ್ರ ವಿಸರ್ಜನಾ ನಾಳವು ಪುರುಷರಿಗಿಂತ ಕಿರಿದಾಗಿರುವುದು ಇದಕ್ಕೆ ಕಾರಣ. ಮೂತ್ರ ವಿಸರ್ಜನಾ ನಾಳವು ಕಿರಿದಾಗಿದ್ದರೆ ಮೂತ್ರಕೋಶವನ್ನು ತಲುಪಲು ಬ್ಯಾಕ್ಟೀರಿಯಾಗಳು ಕಡಿಮೆ ಅಂತರವನ್ನು ಕ್ರಮಿಸಿದರೆ ಸಾಕಾಗುತ್ತದೆ. ಗರ್ಭಿಣಿಯರು ಅಥವಾ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿಯೂ ಈ ಸೋಂಕಿನ ಅಪಾಯ ಹೆಚ್ಚು. ಇತರ ವೈದ್ಯಕೀಯ ಸ್ಥಿತಿಗಳೂ ಮಹಿಳೆಯರು ಮತ್ತು ಪುರುಷರಲ್ಲಿ ಉರಿಮೂತ್ರವನ್ನುಂಟು ಮಾಡುತ್ತವೆ.
ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿಯ ಉರಿಯೂತ ಅಥವಾ ಪ್ರಾಸ್ಟಟೈಟಿಸ್‌ನಿಂದಾಗಿ ಉರಿಮೂತ್ರದ ಅನುಭವವಾಗಬಹುದು.
ಲೈಂಗಿಕವಾಗಿ ಹರಡುವ ಸೋಂಕಿಗೊಳಗಾದರೂ ಉರಿಮೂತ್ರದ ಅನುಭವವಾಗುತ್ತದೆ. ಜನನಾಂಗ ಹರ್ಪಿಸ್, ಗೊನೊರಿಯಾ ಮತ್ತು ಕ್ಲಮೈಡಿಯಾ ಇವು ಇಂತಹ ಕೆಲವು ಸೋಂಕುಗಳಾಗಿವೆ. ಈ ಸೋಂಕುಗಳು ಯಾವಾಗಲೂ ಲಕ್ಷಣಗಳನ್ನು ಹೊಂದಿರುವುದಿಲ್ಲವಾದ್ದರಿಂದ ಈ ಬಗ್ಗೆ ವೈದ್ಯಕೀಯ ತಪಾಸಣೆ ಮುಖ್ಯವಾಗುತ್ತದೆ.
ಮೂತ್ರಕೋಶದ ಉರಿಯೂತ ಅಥವಾ ಸಿಸ್ಟಿಟಿಸ್ ಉರಿಮೂತ್ರಕ್ಕೆ ಇನ್ನೊಂದು ಕಾರಣವಾಗಿದೆ. ಇಂಟರ್‌ಸ್ಟಿಷಿಯಲ್ ಸಿಸ್ಟಿಟಿಸ್(ಐಸಿ) ಅತ್ಯಂತ ಸಾಮಾನ್ಯ ವಿಧದ ಮೂತ್ರಕೋಶದ ಉರಿಯೂತವಾಗಿದೆ. ಮೂತ್ರಕೋಶದಲ್ಲಿ ಮತ್ತು ಶ್ರೋಣಿ ಪ್ರದೇಶದಲ್ಲಿ ನೋವು ಮತ್ತು ಮೃದುತನ ಐಸಿಯ ಲಕ್ಷಣಗಳಲ್ಲಿ ಸೇರಿವೆ. ಅಂದ ಹಾಗೆ ಐಸಿಗೆ ಕಾರಣವಿನ್ನೂ ಗೊತ್ತಾಗಿಲ್ಲ.
ಕೆಲವು ಪ್ರಕರಣಗಳಲ್ಲಿ ವಿಕಿರಣ ಚಿಕಿತ್ಸೆಯು ಮೂತ್ರಕೋಶ ಮತ್ತು ಮೂತ್ರನಾಳ ನೋವುಗಳಿಗೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ರೇಡಿಯೇಷನ್ ಸಿಸ್ಟಿಟಿಸ್ ಎಂದು ಕರೆಯಲಾಗುತ್ತದೆ.
ಮೂತ್ರಪಿಂಡಗಳಲ್ಲಿ ಕಲ್ಲುಗಳು ನಿರ್ಮಾಣಗೊಂಡಿದ್ದರೂ ಸುಗಮ ಮೂತ್ರವಿಸರ್ಜನೆಗೆ ಕಷ್ಟವಾಗುತ್ತದೆ.
ಕೆಲವೊಮ್ಮೆ ಸೋಂಕು ಉರಿಮೂತ್ರಕ್ಕೆ ಕಾರಣವಾಗಿರುವುದಿಲ್ಲ. ಜನನಾಂಗ ಭಾಗಗಳಲ್ಲಿ ಬಳಸುವ ಸಾಬೂನು,ಲೋಷನ್ ಇತ್ಯಾದಿಗಳೂ ಮಹಿಳೆಯರಲ್ಲಿ ಉರಿಮೂತ್ರಕ್ಕೆ ಕಾರಣವಾಗುತ್ತವೆ. ಲಾಂಡ್ರಿ ಡಿಟರ್ಜಂಟ್‌ಗಳಲ್ಲಿರುವ ಬಣ್ಣಗಳು ಮತ್ತು ಟಾಯ್ಲೆಟ್ ಬಳಕೆಯ ಉತ್ಪಾದನೆಗಳೂ ಇದಕ್ಕೆ ಕಾರಣವಾಗಬಹುದು.
ಉರಿಮೂತ್ರದ ಸಮಸ್ಯೆ ಆಗಾಗ್ಗೆ ಕಾಡುತ್ತಿದ್ದರೆ ವೈದ್ಯರಲ್ಲಿಗೆ ತೆರಳಬೇಕಾಗುತ್ತದೆ ಮತ್ತು ಅವರು ತಪಾಸಣೆಯ ಬಳಿಕ ಸೂಕ್ತ ಚಿಕಿತ್ಸೆಯನ್ನು ನೀಡುತ್ತಾರೆ.