ಬಾರಕೂರು: ಜ.25ರಿಂದ ಆಳುಪೋತ್ಸವ, ಹೆರಿಟೇಜ್ ವಾಕ್
ಮಣಿಪಾಲ, ಜ.17: ಹಿಂದೆ ತುಳುನಾಡಿನ ರಾಜಧಾನಿಯಾಗಿದ್ದ ಬಾರಕೂರಿನಲ್ಲಿ ಜ.25ರಿಂದ 27ರವರೆಗೆ ಆಳುಪೋತ್ಸವ, ಹೆರಿಟೇಜ್ ವಾಕ್ ಹಾಗೂ ಜಾನಪದ ಜಾತ್ರೆ ನಡೆಯಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.25ರ ಸಂಜೆ 4:30ಕ್ಕೆ ಹೆರಿಟೇಜ್ ವಾಕ್ ಉದ್ಘಾಟನೆ, ಹೆರಿಟೇಜ್ ವಾಕ್ ಆಂಡ್ರಾಯ್ಡಾ ಆ್ಯಪ್ ಬಿಡುಗಡೆ ಹಾಗೂ ಗಣ್ಯರ ಮೆರವಣಿಗೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಬಾರಕೂರಿನ ಪಂಚಲಿಂಗೇಶ್ವರ ದೇವಸ್ಥಾನದಿಂದ ವಿವಿಧ ಜಾನಪದ ಕಲಾ ತಂಡಗಳು, ಚಂಡೆ, ಕರಗ, ಕೋಲಾಟ, ಕಂಗೀಲು ಕುಣಿತ, ಪೂಜಾ ಕುಣಿತ ಇತ್ಯಾದಿಗಳೊಂದಿಗೆ ಗಣ್ಯರನ್ನು 17 ಪಾರಂಪರಿಕ ತಾಣಗಳ ಮೂಲಕ ಬಾರಕೂರು ಕೋಟೆಯ ವೇದಿಕೆಗೆ ಮೆರವಣಿಗೆಯಲ್ಲಿ ಕರೆತರಲಾಗುವುದು ಎಂದರು.
ಆಳುಪೋತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದ್ದು, ಅವರ ಒಪ್ಪಿಗೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಈ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ, ನಾನಾ ಮಳಿಗೆಗಳ ಉದ್ಘಾಟನೆ ನಡೆಯಲಿದೆ.ಸಂಜೆ 5:30ಕ್ಕೆ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳ್ಳಲಿದೆ. ಸಂಜೆ 7ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇದರೊಂದಿಗೆ ಉಪವೇದಿಕೆಗಳಲ್ಲೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಯಕ್ಷಗಾನ, ಯಕ್ಷಗಾನ ಬೊಂಬೆಯಾಟ, ಸಂಗೀತ ರಸಸಂಜೆ ನಡೆಯಲಿದೆ. ಜ.26ರಂದು ಕತ್ತಲೆ ಬಸದಿಯನ್ನು ಸಂಜೆ 5:30ರಿಂದ 7:30ರವರೆಗೆ ದೀಪಾಲಂಕಾರ ಹಾಗೂ ತುಳುನಾಡಿನ ಸೊಗಡು ಕಾರ್ಯಕ್ರಮವಿದೆ. ಮುಖ್ಯ ವೇದಿಕೆಯಲ್ಲಿ ರಾತ್ರಿ 10ರವೆರೆಗೆ ವಿವಿಧ ಜಾನಪದ ತಂಡಗಳಿಂದ ಪ್ರದರ್ಶನಗಳಿವೆ.
ಜ.27ರ ಬೆಳಗ್ಗೆ 10ರಿಂದ ಆಳುಪರ ಕುರಿತು ವಿಚಾರಸಂಕಿರಣವಿದೆ. ಇದರಲ್ಲಿ ನಾಇನ ಖ್ಯಾತನಾಮ ಇತಿಹಾಸಜ್ಞರು ವಿಚಾರಗಳನ್ನು ಮಂಡಿಸಲಿದ್ದಾರೆ. ಸಂಜೆ 6ರಿಂದ ಅಪರೂಪದ ಸಾಂಸ್ಕೃತಿಕ ವೈಭವವಿದೆ. ಬಾರಕೂರು ಗತ ವೈಭವ ನೃತ್ಯ ರೂಪಕವೂ ನಡೆಯಲಿದೆ. ಇದರೊಂದಿಗೆ ಕೊರಗರ ನಾವಿನ್ಯ ಸಂಗೀತದ ಇಂಪೂ ಕೇಳಿಬರಲಿದೆ ಎಂದರು.
ಆಳುಪೋತ್ಸವಕ್ಕಾಗಿ ರಾಜ್ಯ ಸರಕಾರದಿಂದ ಎರಡು ಕೋಟಿ ರೂ. ಅನುದಾನವನ್ನು ಕೋರಿದ್ದೇವೆ. 25 ಲಕ್ಷ ರೂ.ವೆಚ್ಚದಲ್ಲಿ ಉತ್ಸವ ನಡೆಸುವ ಯೋಜನೆಯಿದೆ ಎಂದು ಜಿಲ್ಲಾಧಿಕಾರಿ ನುಡಿದರು. ಇದೇ ಸಂದರ್ಭದಲ್ಲಿ ಅವರು ಆಳುಪೋತ್ಸವ ಲಾಂಛನ ಹಾಗೂ ಪ್ರವಾಸೋದ್ಯಮ ಇಲಾಖೆಯ ಈ ವರ್ಷದ ಟೇಬಲ್‌ಟಾಪ್ ಕ್ಯಾಲಂಡರ್ ಬಿಡುಗಡೆಗೊಳಿಸಿದರು.







