ಮಲ್ಪೆ: ಜ.18ರಿಂದ ಬೀಚ್ ದ್ರಾಕ್ಷಾರಸ ಉತ್ಸವ
ಉಡುಪಿ, ಜ.17:ಕರ್ನಾಟಕ ದ್ರಾಕ್ಷಾರಸ ಮಂಡಳಿಯು ಮಲ್ಪೆ ಅಬಿವೃದ್ಧಿ ಸಮಿತಿ, ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅಬಕಾರಿ ಇಲಾಖೆಗಳ ಸಹಯೋಗದೊಂದಿಗೆ ಜ.18ರಿಂದ 20ರವರೆಗೆ ಮೂರು ದಿನಗಳ ಕಾಲ ಮಲ್ಪೆ ಬೀಚ್‌ನಲ್ಲಿ ಅಂತಾರಾಷ್ಟ್ರೀಯ ಬೀಚ್ ದ್ರಾಕ್ಷಾ ರಸ ಉತ್ಸವ’ವನ್ನು ಹಮ್ಮಿಕೊಂಡಿದೆ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಟಿ.ಸೋಮು ತಿಳಿಸಿದ್ದಾರೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀಚ್ ದ್ರಾಕ್ಷಾರಸ ಉತ್ಸವನ್ನು ನಾಳೆ ಸಂಜೆ 6ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಉದ್ಘಾಟಿಸಲಿದ್ದಾರೆ. ರಾಜ್ಯ ತೋಟಗಾರಿಕಾ ಸಚಿವ ಎಂ.ಸಿ. ಮನಗೊಳಿ ಅವರು ದ್ರಾಕ್ಷಾರಸ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಈ ಉತ್ಸವದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಸುಮಾರು 10ರಿಂದ 12 ವೈನರಿಗಳು ಭಾಗವಹಿಸಲಿವೆ. ಸುಮಾರು 150ಕ್ಕೂ ಅಧಿಕ ಬ್ರಾಂಡ್ ಗಳನ್ನು ಪ್ರದರ್ಶಿಸಲಾಗುವುದು ಎಂದರು. ಹಳೆಯ ವೈನ್ ಪ್ರದೇಶಗಳಾದ ಯುರೋಪ್ ಖಂಡ ಹಾಗೂ ಹೊಸ ವೈನ್ ಪ್ರದೇಶಗಳಾದ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚಿಲಿ, ಅಮೇರಿಕಾ ಹಾಗೂ ಇತರ ದೇಶಗಳ ವೈನ್‌ಗಳ ಪ್ರದರ್ಶನ ಮತ್ತು ಮಾರಾಟವೂ ಇಲ್ಲಿ ನಡೆಯಲಿದೆ ಎಂದು ಸೋಮು ತಿಳಿಸಿದರು.
ಆರೋಗ್ಯದ ದೃಷ್ಟಿಯಿಂದ ವೈನ್ ಬಳಕೆಯನ್ನು ಉತ್ತೇಜಿಸಲು, ವೈನ್ ದ್ರಾಕ್ಷಿ ಬೆಳೆಯುವ ಹಾಗೂ ವೈ’ನ್ ತಯಾರಿಕೆ ಬಗ್ಗೆ ತರಬೇತಿ ಮತ್ತು ವೈನ್ ತಯಾರಕರು ಮತ್ತು ಸಾರ್ವಜನಿಕರ ನಡುವೆ ವಿಚಾರ ವಿನಿಮಯ ಆಯೋಜಿಸಲಾಗುವುದು. ಪ್ರದರ್ಶನದಲ್ಲಿ ವಿವಿಧ ಆಹಾರ ಪದಾರ್ಥಗಳ ಹಾಗೂ ತಿನಿಸು ಮಳಿಗೆಗಳನ್ನು ತೆರೆಯಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕಿ ಭುವನೇಶ್ವರಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಅನಿತಾ ಭಾಸ್ಕರ್, ಮಂಡಳಿಯ ಪ್ರಧಾನ ವ್ಯವಸ್ಥಾಪಕ ಸರ್ವೇಶ ಕುಮಾರ್ ಉಪಸ್ಥಿತರಿದ್ದರು.







