ಶಬರಿಮಲೆ ಪ್ರವೇಶಿಸಿರುವ ಮಹಿಳೆಯರಿಗೆ ಭದ್ರತೆ ಒದಗಿಸಲು ಕೇರಳ ಸರಕಾರಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಜ.18: ಈ ತಿಂಗಳಾರಂಭದಲ್ಲಿ ಶಬರಿಮಲೆ ಪ್ರವೇಶಿಸಿದ ಬಳಿಕ ಜೀವ ಬೆದರಿಕೆ ಎದುರಿಸುತ್ತಿರುವ ಇಬ್ಬರು ಮಹಿಳೆಯರಿಗೆ ಸಾಕಷ್ಟು ಹಾಗೂ ಸಂಪೂರ್ಣ ಭದ್ರತೆ ಒದಗಿಸುವಂತೆ ಕೇರಳ ಸರಕಾರಕ್ಕೆ ಶುಕ್ರವಾರ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಇಬ್ಬರ ಮಹಿಳೆಯರಾದ ಕನಕದುರ್ಗಾ ಹಾಗೂ ಬಿಂದು ಶಬರಿಮಲೆ ದೇಗುಲ ಪ್ರವೇಶಿಸಿದ ಬಳಿಕ ನಮಗೆ ಜೀವಬೆದರಿಕೆ ಬರುತ್ತಿದ್ದು ಎಲ್ಲ ಸಮಯ ಬಿಗು ಭದ್ರತೆ ನೀಡಬೇಕೆಂದು ಸುಪ್ರೀಂಕೋರ್ಟ್ ಕದ ತಟ್ಟಿದ್ದರು.
ಎಲ್ಲ ವಯೋಮಾನದವರು ಶಬರಿಮಲೆ ದೇಗುಲ ಪ್ರವೇಶಿಸಬಹುದು ಎಂದು ಕಳೆದ ವರ್ಷ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತ್ತು.
ಕೇರಳ ಮಹಿಳೆಯರಿಬ್ಬರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ, ಮಹಿಳೆಯರು ದೇಗುಲ ಪ್ರವೇಶಿಸಿದ ಬಳಿಕ ಶುದ್ದೀಕರಣ ಮಾಡದಂತೆ ಅರ್ಚಕರಿಗೆ ನಿರ್ದೇಶನ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲಿಲ್ಲ. ಕನಕದುರ್ಗಾ ಹಾಗೂ ಬಿಂದು ದೇಗುಲ ಪ್ರವೇಶಿಸಿದ ಬಳಿಕ ಅಯ್ಯಪ್ಪ ದೇಗುಲವನ್ನು ಬಂದ್ ಮಾಡಿ ಅಲ್ಲಿನ ಅರ್ಚಕರು ಶುದ್ದೀಕರಣ ಮಾಡಿದ್ದರು.
10ರಿಂದ 50 ವಯಸ್ಸಿನ ಮಹಿಳೆ ದೇಗುಲ ಪ್ರವೇಶಿಸಿದ ಬಳಿಕ ಶುದ್ದಮಾಡುವುದು ಅಥವಾ ದೇಗುಲದ ಬಾಗಿಲು ಬಂದ್ ಮುಚ್ಚದಂತೆ, ಎಲ್ಲ ವಯೋಮಾನದವರು ಯಾವುದೇ ಅಡೆತಡೆಯಿಲ್ಲದೆ, ಪೊಲೀಸ್ ಭದ್ರತೆಯಿಲ್ಲದೆ ದೇಗುಲ ಪ್ರವೇಶಿಸಲು ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಆಗ್ರಹಿಸಿದ್ದಾರೆ.
ಶುದ್ದೀಕರಣ ಆಚರಣೆ ಎನ್ನುವುದು ಸ್ವಚ್ಛಗೊಳಿಸುವುದಾಗಿದೆ. ದೇಗುಲದೊಳಗೆ ಹೋದವರು ಅಶುದ್ಧರು ಎಂಬ ಅರ್ಥ ಬರುತ್ತದೆ. ಇದು ಸಂವಿಧಾನದ ವಿಧಿ 21ರ ಪ್ರಕಾರ ಅವರ ಘನತೆಯ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ತಿಳಿಸಿದ್ದಾರೆ