ಬೈಪೋಲಾರ್ ಡಿಸಾರ್ಡರ್ ಎಂದರೇನು...?
ಬೈಪೋಲಾರ್ ಡಿಸಾರ್ಡರ್ ಅಥವಾ ದ್ವಿಧ್ರುವೀಯ ಅಸ್ವಸ್ಥತೆಯು ಉನ್ಮಾದ-ಖಿನ್ನತೆಯನ್ನು ಒಳಗೊಂಡಿದೆ. ಇದೊಂದು ಮಾನಸಿಕ ಕಾಯಿಲೆಯಾಗಿದ್ದು ಅತಿಯಾದ ಮನಃಸ್ಥಿತಿ ಬದಲಾವಣೆಗಳನ್ನುಂಟು ಮಾಡುತ್ತದೆ. ಭಾವಾತಿರೇಕದಷ್ಟೇ ತೀವ್ರ ಖಿನ್ನತೆಯೂ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯಿದ್ದವರಿಗೆ ದೈನಂದಿನ ಕೆಲಸಗಳನ್ನು ಪೂರೈಸಲೂ ಕಷ್ಟವಾಗುತ್ತದೆ. ವ್ಯಕ್ತಿ ಹೆಚ್ಚಿನೆಲ್ಲ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು. ಮನಃಸ್ಥಿತಿಯಲ್ಲಿನ ತೀವ್ರ ಬದಲಾವಣೆಗಳು ನಿಮ್ಮ ನಿದ್ರೆಯ ಸ್ವರೂಪ,ವರ್ತನೆ,ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಶಕ್ತಿಯ ಮಟ್ಟದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ. ದ್ವಿಧ್ರುವೀಯ ಅಸ್ವಸ್ಥತೆಯನ್ನು ಮೂರು ವಿಧಗಳಲ್ಲಿ ವರ್ಗೀಕರಿಸಲಾಗಿದೆ.
ಬೈಪೋಲಾರ್ I
ಇದು ಕನಿಷ್ಠ ಏಳು ದಿನಗಳ ಕಾಲ ಮುಂದುವರಿಯಬಹುದಾದ ಉನ್ಮಾದ ಮತ್ತು ಖಿನ್ನತೆಗಳ ಸಮ್ಮಿಶ್ರ ಸರಣಿಯಾಗಿದೆ. ಉನ್ಮಾದದ ಲಕ್ಷಣಗಳು ತೀವ್ರಗೊಂಡರೆ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಇದೇ ಸರಣಿಯಲ್ಲಿ ಕಾಣಿಸಿಕೊಳ್ಳುವ ಖಿನ್ನತೆಯ ಲಕ್ಷಣಗಳು ಕೂಡ ಏಳು ದಿನಗಳ ಕಾಲ ಮುಂದುವರಿಯಬಹುದು.
ಬೈಪೋಲಾರ್ II
ಈ ಹಂತದಲ್ಲಿ ಖಿನ್ನತೆ ಮತ್ತು ಲಘು ಉನ್ಮಾದ ಒಟ್ಟಾಗಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಆದರೆ ಈ ವಿಧದಲ್ಲಿ ಪ್ರಬಲ ಉನ್ಮಾದ ಮತ್ತು ಖಿನ್ನತೆಗಳು ಸರಣಿಯಲ್ಲಿ ಜಂಟಿಯಾಗಿ ಕಂಡುಬರುವುದಿಲ್ಲ.
ಸೈಕ್ಲೋಥಿಮಿಯಾ
ಇದು ಕನಿಷ್ಠ ಎರಡು ವರ್ಷಗಳಿಂದ ವ್ಯಕ್ತಿಯಲ್ಲಿ ಇದ್ದಿರಬಹುದಾದ ಲಘು ಉನ್ಮಾದ ಮತ್ತು ಸ್ವಲ್ಪ ಮಟ್ಟಿನ ಖಿನ್ನತೆಯಿಂದ ಕೂಡಿದ ದ್ವಿಧ್ರುವೀಯ ಅಸ್ವಸ್ಥತೆಯ ಲಘು ಸ್ವರೂಪವಾಗಿದೆ.
ದ್ವಿಧ್ರುವೀಯ ಅಸ್ವಸ್ಥತೆಯ ಎಚ್ಚರಿಕೆಯ ಸಂಕೇತಗಳು
ಇತರ ವೈದ್ಯಕೀಯ ಸ್ಥಿತಿಗಳೂ ಇಂತಹುದೇ ಲಕ್ಷಣಗಳನ್ನು ಪ್ರಕಟಿಸುವುದರಿಂದ ದ್ವಿಧ್ರುವೀಯ ಅಸ್ವಸ್ಥತೆಯ ಲಕ್ಷಣಗಳನ್ನು ಖಚಿತವಾಗಿ ಗುರುತಿಸುವುವುದು ಕಠಿಣವಾಗುತ್ತದೆ. ಈ ರೋಗದಿಂದ ಬಳಲುತ್ತಿರುವ ರೋಗಿಗಳಲ್ಲಿ ಉನ್ಮಾದ ಮತ್ತು ಖಿನ್ನತೆ ಹೀಗೆ ಎರಡು ಹಂತಗಳಲ್ಲಿ ಲಕ್ಷಣಗಳು ಕಂಡುಬರುತ್ತವೆ.
ಉನ್ಮಾದದ ಲಕ್ಷಣಗಳು
ಬಲವಾದ ಕಾರಣವಿಲ್ಲದೆ ಸುದೀರ್ಘ ಅವಧಿಯವರೆಗೆ ಹೆಚ್ಚಿನ ಉತ್ಸಾಹ ಹಾಗೂ ರಚನಾತ್ಮಕತೆಯೊಂದಿಗೆ ಅತಿಯಾದ ಸಂತೋಷ,ನಿದ್ರೆ ಮಾಡಲು ಸಾಧ್ಯವಾಗದಿರುವುದು,ಸತತ ಆಲೋಚನೆಗಳಲ್ಲಿ ಮುಳುಗಿರುವುದು ಅಥವಾ ಅತಿ ವೇಗವಾಗಿ ಮಾತನಾಡುವುದು,ತಲೆಯಲ್ಲಿ ಭರಪೂರ ಕಲ್ಪನೆಗಳು,ಪ್ರತಿಯೊಂದರ ಬಗ್ಗೆಯೂ ನಿರಂತರ ಅತ್ಯುತ್ಸಾಹ,ಅವಿಶ್ರಾಂತಿ ಅನುಭವ,ಆಗಾಗ್ಗೆ ಗಮನ ಬದಲಾವಣೆ,ಕೆರಳುವಿಕೆ ಮತ್ತು ಹೆಚ್ಚಿನ ಮದ್ಯಪಾನ, ಕಡ್ಡಾಯವಾಗಿ ಖರೀದಿಯಲ್ಲಿ ತೊಡಗುವುದು ಮತ್ತು ಅತಿಯಾದ ಆತ್ಮವಿಶ್ವಾಸ ಇತ್ಯಾದಿಗಳು ಉನ್ಮಾದದ ಹಂತದಲ್ಲಿಯ ಲಕ್ಷಣಗಳಾಗಿವೆ.
ಖಿನ್ನತೆಯ ಲಕ್ಷಣಗಳು
ಹಸಿವು ಕ್ಷೀಣಗೊಳ್ಳುವುದು ಅಥವಾ ಹಸಿವು ಹೆಚ್ಚುವುದು,ಬಳಲಿಕೆ ಅಥವಾ ಶಕ್ತಿಯ ಕೊರತೆ,ದುಃಖಿತ ಭಾವನೆ,ಖಾಲಿಯಾದಂತೆನ್ನಿವುದು ಮತ್ತು ನಿರಾಶಾವಾದ,ಆಲೋಚಿಸುವ ಮತ್ತು ಏಕಾಗ್ರತೆಯ ಅಸಾಮರ್ಥ್ಯ,ಆತ್ಮಹತ್ಯೆಯ ಅಲೋಚನೆಗಳು,ಶರೀರದ ತೂಕದಲ್ಲಿ ಇಳಿಕೆ ಅಥವಾ ಏರಿಕೆ,ಕುಟುಂಬ ಮತ್ತು ಸ್ನೇಹಿತರಿಂದ ವಿಮುಖರಾಗುವುದು ಇವೆಲ್ಲ ಖಿನ್ನತೆ ಹಂತದ ಲಕ್ಷಣಗಳಾಗಿವೆ.
ದ್ವಿಧ್ರುವೀಯ ಅಸ್ವಸ್ಥತೆಗೆ ಚಿಕಿತ್ಸೆ ಹೇಗೆ?
ವ್ಯಕ್ತಿಯಲ್ಲಿ ಇಂತಹ ಲಕ್ಷಣಗಳು ಕಾಣಿಸಿದರೆ ಮನೋರೋಗ ವೈದ್ಯರನ್ನು ಭೇಟಿಯಾಗುವುದು ಅತ್ಯಗತ್ಯವಾಗುತ್ತದೆ. ಮನಃಸ್ಥಿತಿಯಲ್ಲಿನ ಬದಲಾವಣೆಗಳ ವಿರುದ್ಧ ಹೊರಾಡಲು ಅವರು ಖಂಡಿತವಾಗಿ ನೆರವಾಗುತ್ತಾರೆ. ವೈದ್ಯರು ಸೂಚಿಸಿದಂತೆ ಚಿಕಿತ್ಸೆಯನ್ನು ಪಡೆಯುವುದು ಮತ್ತು ಔಷಧಿಗಳನ್ನು ಸೇವಿಸುವುದು ಮುಖ್ಯವಾಗುತ್ತದೆ. ಅಲ್ಲದೆ ನಾವು ಸೇವಿಸುವ ಆಹಾರವು ಕೂಡ ನಮ್ಮ ಚಿತ್ತವೃತ್ತಿಯ ಮೇಲೆ ಪರಿಣಾಮಗಳನ್ನುಂಟು ಮಾಡುತ್ತದೆ. ಮದ್ಯ ಮತ್ತು ಕೆಫಿನ್ ಸೇವನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಬೇಕು.ವೈದ್ಯರು ಕೆಲವು ಪೌಷ್ಟಿಕಾಂಶಗಳನ್ನು ಸೂಚಿಸಬಹುದು. ಸೂಕ್ತ ಆಹಾರವು ಔಷಧಿಗಳ ಧನಾತ್ಮಕ ಪರಿಣಾಮವನ್ನು ಹೆಚ್ಚಿಸುತ್ತದೆ. ಮದ್ಯಪಾನವು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.
ಚೆನ್ನಾಗಿ ನಿದ್ರಿಸಿ
ನಿಮ್ಮ ನಿದ್ರೆಯ ಸ್ವರೂಪವು ನಿಮ್ಮ ಮನಃಸ್ಥಿತಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಸರಿಯಾದ ನಿದ್ರೆ ದೊರೆಯದಿದ್ದಾಗ ಹೆಚ್ಚಿನ ಕೆರಳುವಿಕೆ ಮತ್ತು ಬಳಲಿಕೆಯ ಅನುಭವವಾಗುತ್ತದೆ. ನಿಗದಿತ ವೇಳೆಯಲ್ಲಿ ನಿದ್ರಿಸುವುದನ್ನು ರೂಢಿಸಿಕೊಳ್ಳಬೇಕು. ನಿಮಗೆ ನಿದ್ರಾಹೀನತೆಯ ಸಮಸ್ಯೆ ಕಾಡುತ್ತಿದ್ದರೆ ವೈದ್ಯರನ್ನು ಕಂಡು ಪರಿಹಾರ ಪಡೆಯಬೇಕಾಗುತ್ತದೆ.
ಒತ್ತಡವನ್ನು ತಗ್ಗಿಸಿ
ಅತಿಯಾದ ಒತ್ತಡವು ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹಾನಿಕಾರಕವಾಗಬಲ್ಲದು. ಒತ್ತಡ ಹೆಚ್ಚಾಗದಂತೆ ಅತಿಯಾದ ಪರಿಶ್ರಮ ಮತ್ತು ಕೆಲಸಗಳ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು. ಒತ್ತಡದ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಧ್ಯಾನದಂತಹ ಒತ್ತಡವನ್ನು ತಗ್ಗಿಸುವ ವಿಧಾನಗಳು ಈ ನಿಟ್ಟಿನಲ್ಲಿ ನೆರವಾಗುತ್ತವೆ.
ವ್ಯಾಯಾಮ
ನಿಯಮಿತ ವ್ಯಾಯಾಮವು ಮುಖ್ಯವಾಗಿದೆ,ಏಕೆಂದರೆ ಅದು ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತದೆ. ಸೈಕ್ಲಿಂಗ್,ಈಜುವಿಕೆ,ಬಿರುಸಿನ ನಡಿಗೆ ಇತ್ಯಾದಿಗಳಂತಹ ಯಾವುದೇ ವ್ಯಾಯಾಮವನ್ನು ನೀವು ಮಾಡಬಹುದು.