ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ದಿನೇಶ್ ಮಹೇಶ್ವರಿ, ಸಂಜೀವ್ ಖನ್ನಾ ಪ್ರಮಾಣ
ಹೊಸದಿಲ್ಲಿ, ಜ. 18: ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ಸಂಜೀವ್ ಖನ್ನಾ ಶುಕ್ರವಾರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. ಸುಪ್ರೀಂ ಕೋರ್ಟ್‌ನ 1ನೇ ಸಂಖ್ಯೆಯ ನ್ಯಾಯಾಲಯದಲ್ಲಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಮಹೇಶ್ವರಿ ಹಾಗೂ ಖನ್ನಾ ಅವರಿಗೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಪ್ರಮಾಣ ವಚನ ಬೋಧಿಸಿದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಇವರ ಅಧಿಕಾರಾವಧಿ ಅನುಕ್ರಮವಾಗಿ 2023 ಮೇ 14 ಹಾಗೂ 2025 ಮೇ 13ರ ವರೆಗೆ ಇರಲಿದೆ.
ಸುಪ್ರೀಂ ಕೋರ್ಟ್‌ಗೆ ಮಂಜೂರು ಮಾಡಲಾದ ನ್ಯಾಯಾಧೀಶರ ಸಂಖ್ಯೆ 31. ನ್ಯಾಯಮೂರ್ತಿಗಳಾದ ಮಹೇಶ್ವರಿ ಹಾಗೂ ಖನ್ನಾ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ನ್ಯಾಯಮೂರ್ತಿ ಚಂದ್ರಚೂಡ ಅವರ ಬಳಿಕ 2024 ನವೆಂಬರ್‌ನಲ್ಲಿ ಸಂಜೀವ್ ಖನ್ನಾ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೆ.
ಸುಪ್ರೀಂ ಕೋರ್ಟ್‌ನ ಕೊಲೀಜಿಯಂನ ಶಿಫಾರಸಿನಂತೆ ಕೇಂದ್ರ ಸರಕಾರ ಬುಧವಾರ ನ್ಯಾಯಮೂರ್ತಿ ಖನ್ನಾ ಹಾಗೂ ಮಹೇಶ್ವರಿ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿತ್ತು. ಸುಪ್ರೀಂ ಕೋರ್ಟ್‌ನ ಐವರು ಸದಸ್ಯರನ್ನು ಒಳಗೊಂಡ ಕೊಲಿಜಿಯಂ 2018 ಡಿಸೆಂಬರ್ 12ರಂದು ದಿಲ್ಲಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಹಾಗೂ ರಾಜಸ್ಥಾನದ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಪ್ರದೀಪ್ ನಂದ್ರಜೋಗ್ ಅವರನ್ನು ಸುಪ್ರೀಂ ಕೋರ್ಟ್‌ಗೆ ಭಡ್ತಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ, ಜನವರಿ 10ರಂದು ನಿರ್ಧಾರ ಬದಲಿಸಿದ ಕೊಲಿಜಿಯಂ ಅವರ ಬದಲಿಗೆ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ಸಂಜೀವ್ ಖನ್ನಾ ಅವರನ್ನು ಸುಪ್ರೀಂ ಕೋರ್ಟ್‌ಗೆ ಭಡ್ತಿ ನೀಡಲು ನಿರ್ಧರಿಸಿತ್ತು.